ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ನ ಅಧಿಕೃತ ವೆಬ್ಸೈಟ್ ಹೋಲುವ ನಕಲಿ ಯುಆರ್ಎಲ್ (URL) ಸೃಷ್ಟಿಸಿ, ನೂರಾರು ಜನರನ್ನು ಭೀಕರ ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಕೇಂದ್ರ ತನಿಖಾ ದಳ (CBI) ಯಶಸ್ವಿಯಾಗಿ ಧ್ವಂಸಗೊಳಿಸಿದೆ. ಈ ದೂಳೀಪಟ ಕಾರ್ಯಾಚರಣೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ದೇಶದ 16 ರಾಜ್ಯಗಳ ಒಟ್ಟು 80 ಪ್ರದೇಶಗಳಲ್ಲಿ ಗುರುವಾರ ಏಕಕಾಲಕ್ಕೆ ಭಾರಿ ದಾಳಿ ನಡೆಸಿದ್ದಾರೆ. ಪಶ್ಚಿಮದ ಪಂಜಾಬ್ ಮತ್ತು ಗುಜರಾತ್ನಿಂದ ಹಿಡಿದು ಈಶಾನ್ಯದ ಅಸ್ಸಾಂ ಹಾಗೂ ಮಣಿಪುರದವರೆಗೆ ಹರಡಿದ್ದ ಈ ವಂಚನೆ ಜಾಲವನ್ನು ಮಟ್ಟಹಾಕಲು ಸಿಬಿಐ ‘ಆಪರೇಷನ್ ಚಕ್ರಾ-VI’ ಎಂಬ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
200ಕ್ಕೂ ಹೆಚ್ಚು ದೂರು
ಸಾರ್ವಜನಿಕರನ್ನು ಡಿಜಿಟಲ್ ರೂಪದಲ್ಲಿ ಬಂಧಿಸುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ಈ ಜಾಲದ ವಿರುದ್ಧ ಈಗಾಗಲೇ 200ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಸಾರ್ವಜನಿಕರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದ ಈ ಖದೀಮರು, ತಾವು ಹಿರಿಯ ಪೊಲೀಸ್ ಅಧಿಕಾರಿಗಳು, ಕೇಂದ್ರ ತನಿಖಾ ಸಂಸ್ಥೆಗಳ ದಕ್ಷ ಅಧಿಕಾರಿಗಳು ಅಥವಾ ನ್ಯಾಯಾಧೀಶರು ಎಂದು ಸುಳ್ಳು ಹೇಳಿ ಪರಿಚಯಿಸಿಕೊಳ್ಳುತ್ತಿದ್ದರು. ನಂತರ ಸಂತ್ರಸ್ತರು ಯಾವುದೋ ಗಂಭೀರ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೆದರಿಸಿ, ಜೈಲು ಶಿಕ್ಷೆ ಮತ್ತು ಕಾನೂನು ಕ್ರಮದಿಂದ ಪಾರಾಗಲು ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡುತ್ತಿದ್ದರು. ಈ ಇಡೀ ವಂಚನೆಯ ಕೇಂದ್ರಬಿಂದು ಸುಪ್ರೀಂ ಕೋರ್ಟ್ನ ಅಧಿಕೃತ ಜಾಲತಾಣವನ್ನು ಹೋಲುವ ನಕಲಿ ವೆಬ್ಸೈಟ್ ಆಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿಯೇ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಈಗ ವಂಚಕರ ಹೆಡೆಮುರಿ ಕಟ್ಟಿದೆ.
ಭಾರಿ ಕಾರ್ಯಾಚರಣೆ; ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಇಬ್ಬರ ಬಂಧನ
ಸಿಬಿಐ ನಡೆಸಿದ ಈ ಮಿಂಚಿನ ಕಾರ್ಯಾಚರಣೆಯು ವಂಚಕ ಜಾಲದ ಪ್ರಮುಖ ಸೂತ್ರಧಾರಿಗಳಾದ ಚೆನ್ನೈನ ಬಿ. ನರೇಶ್ ಮತ್ತು ಕೋಲ್ಕತ್ತಾದ ಸಂಜೀಬ್ ಸಹಾ ಎಂಬ ಇಬ್ಬರು ಆರೋಪಿಗಳ ಬಂಧನದೊಂದಿಗೆ ಮುಕ್ತಾಯಗೊಂಡಿದೆ. ಈ ಆರೋಪಿಗಳು ಕೇವಲ ಜನರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿರಲಿಲ್ಲ, ಬದಲಿಗೆ ಆ ಹಣದ ಮೂಲವನ್ನು ಮರೆಮಾಚಲು ನಕಲಿ ಮತ್ತು ಶೆಲ್ ಕಂಪನಿಗಳನ್ನು ಸ್ಥಾಪಿಸಿದ್ದರು. ಅಷ್ಟೇ ಅಲ್ಲದೆ, ಬೇರೆಯವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು (ಮ್ಯೂಲ್ ಅಕೌಂಟ್ಸ್) ತೆರೆದು ಸುಮಾರು 2 ಕೋಟಿ ರೂಪಾಯಿಗಳಿಗೂ ಅಧಿಕ ಅಪರಾಧದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಸೈಬರ್ ವಂಚಕರು ಸುಪ್ರೀಂ ಕೋರ್ಟ್ ಹೆಸರಿನ ನಕಲಿ ವೆಬ್ಸೈಟ್ನಲ್ಲಿ ಅಸಲಿ ನ್ಯಾಯಾಲಯದ ಆದೇಶಗಳು, ವಾರೆಂಟ್ಗಳು ಮತ್ತು ನೋಟಿಸ್ಗಳನ್ನು ಹೋಲುವ ನಕಲಿ ದಾಖಲೆಗಳನ್ನು ಅಪ್ಲೋಡ್ ಮಾಡುತ್ತಿದ್ದರು. ತಾವೇ ಸೃಷ್ಟಿಸಿದ ನಕಲಿ ಕೋರ್ಟ್ ಆರ್ಡರ್ಗಳನ್ನು ಸಂತ್ರಸ್ತರಿಗೆ ತೋರಿಸಿ ತಮ್ಮ ಕಾನೂನುಬಾಹಿರ ಕೃತ್ಯಕ್ಕೆ ಅಸಲಿ ರೂಪ ನೀಡುತ್ತಿದ್ದರು. ಸಿಬಿಐನ ತಾಂತ್ರಿಕ ತಜ್ಞರು ಮತ್ತು ಸುಧಾರಿತ ವಿಧಿವಿಜ್ಞಾನ (ಫೋರೆನ್ಸಿಕ್) ಉಪಕರಣಗಳ ಸಹಾಯದಿಂದ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಹರಡಿರುವ ಈ ಕ್ರಿಮಿನಲ್ ಜಾಲದ ನೆಟ್ವರ್ಕ್ ಅನ್ನು ಪತ್ತೆಹಚ್ಚಲಾಗಿದೆ. ಈ ವಂಚಕರು ಕೇವಲ ಭಾರತೀಯರನ್ನು ಮಾತ್ರವಲ್ಲದೆ ವಿದೇಶಿ ನಾಗರಿಕರನ್ನೂ ಟಾರ್ಗೆಟ್ ಮಾಡುತ್ತಿದ್ದರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಸಿಬಿಐ ಅಧಿಕಾರಿಗಳು ವಂಚನೆಗೆ ಬಳಸುತ್ತಿದ್ದ ನೂರಾರು ಮೊಬೈಲ್ ಫೋನ್ಗಳು, ಡಿಜಿಟಲ್ ಸಾಧನಗಳು, ಬ್ಯಾಂಕ್ ದಾಖಲೆಗಳು ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಪುಣೆ ಲೋಹಗಢ ಕೋಟೆ ಚಾರಣ ದುರಂತಕ್ಕೆ ಟ್ವಿಸ್ಟ್: ಉದ್ಯಮಿ ಕೇತನ್ ಸಾವು ಅಪಘಾತವಲ್ಲ
