ಗದಗ: ಉತ್ತರ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಗದಗದ (Gadag) ವೀರೇಶ್ವರ ಪುಣ್ಯಾಶ್ರಮದಲ್ಲಿ ಈಗ ಭಿನ್ನಮತದ ಸ್ಫೋಟವಾಗಿದೆ. ಮಠದ ವಾರ್ಷಿಕ ರಥೋತ್ಸವದ ಸುತ್ತ ವಿವಾದಗಳು ಹಬ್ಬುತ್ತಿರುವ ಬೆನ್ನಲ್ಲೇ, ಆಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ತಮಗೆ ಸ್ವಂತ ಟ್ರಸ್ಟ್ ಕಮಿಟಿಯ ಸದಸ್ಯರಿಂದಲೇ ಪ್ರಾಣ ಭೀತಿ ಎದುರಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಮಠದಲ್ಲಿ ಆಯೋಜಿಸಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲೂ ತಮ್ಮ ಮೇಲೆ ಭೌತಿಕ ಹಲ್ಲೆ ನಡೆಯುವ ಸಂಭವವಿದ್ದು, ತಮಗೆ ಸೂಕ್ತ ರಕ್ಷಣೆ ಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಠದ ಕೋಟ್ಯಂತರ ರೂಪಾಯಿ ನಿಧಿಯ ಮೇಲೆ ಕಣ್ಣಿಟ್ಟಿದ್ದಾರಾ ಟ್ರಸ್ಟಿಗಳು? ತಾವು ಪೀಠಕ್ಕೇರಿದ ನಂತರ ಆಶ್ರಮದಲ್ಲಿ ಆದ ಆರ್ಥಿಕ ಸುಧಾರಣೆಗಳನ್ನು ವಿವರಿಸಿದ ಶ್ರೀಗಳು, “ನಾನು ಅಧಿಕಾರ ವಹಿಸಿಕೊಂಡಾಗ ಮಠಕ್ಕೆ 59 ಲಕ್ಷ ರೂಪಾಯಿ ಸಾಲದ ಹೊರೆ ಇತ್ತು. ಭಕ್ತರ ನೆರವಿನಿಂದ ಆ ಸಾಲವನ್ನೆಲ್ಲಾ ಮುಕ್ತಾಯಗೊಳಿಸಿದ್ದಲ್ಲದೆ, ಸದ್ಯ ಮಠದ ಹೆಸರಿನಲ್ಲಿ ಬ್ಯಾಂಕಿನಲ್ಲಿ 4 ಕೋಟಿ ರೂಪಾಯಿ ಸ್ಥಿರ ಠೇವಣಿ (FD) ಇರಿಸಿದ್ದೇನೆ. ಪ್ರತಿಯೊಂದು ನಯಾಪೈಸೆಗೂ ನನ್ನ ಬಳಿ ಪಕ್ಕಾ ಲೆಕ್ಕವಿದೆ. ಆದರೆ ಮಠದ ಈ ಆರ್ಥಿಕ ಬೆಳವಣಿಗೆಯನ್ನು ಸಹಿಸದ ಟ್ರಸ್ಟ್ ಸದಸ್ಯರಾದ ಇಟಗಿ ವೀರಭದ್ರಪ್ಪ, ಪ್ರಕಾಶ ಬಸರಿಗಿಡದ, ವಸಂತಗೌಡ ಪೊಲೀಸ್ ಪಾಟೀಲ ಹಾಗೂ ಶಿಕ್ಷಣ ಸಮಿತಿಯ ಪ್ರಮುಖರಾದ ಎಸ್.ಎಂ. ಗೌಡರ, ಚಕ್ರಣ್ಣವರ ಮತ್ತು ಶ್ರೀಮಠ ಮಲ್ಲಯ್ಯ ಅವರು ನನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ” ಎಂದು ಮುಕ್ತವಾಗಿ ದೂರಿದ್ದಾರೆ.
ಇದೇ ವೇಳೆ ಟ್ರಸ್ಟಿಗಳ ಅಸಲಿ ಉದ್ದೇಶವನ್ನು ಬಯಲು ಮಾಡಿದ ಅಜ್ಜಯ್ಯನವರು, “ಸದಸ್ಯರಾದ ಇಟಗಿ ವೀರಭದ್ರಪ್ಪ ಅವರು ಈ ಹಿಂದೆ ಮಠದ ನಿಧಿಯಿಂದ ತಮಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದರು. ಮಠದ ಹಣವನ್ನು ವೈಯಕ್ತಿಕ ಹಿತಾಸಕ್ತಿಗೆ ಕೊಡಲು ನಾನು ಒಪ್ಪದಿದ್ದಾಗ, ನನ್ನ ವಿರುದ್ಧ ಸುಳ್ಳು ಸುದ್ದಾರಗಳನ್ನು ಹಬ್ಬಿಸಿ ತೇಜೋವಧೆ ಮಾಡಲು ಆರಂಭಿಸಿದರು. ಇಷ್ಟು ದಿನ ಆಶ್ರಮದ ಘನತೆಗೆ ಧಕ್ಕೆ ಬರಬಾರದೆಂದು ಸುಮ್ಮನಿದ್ದೆ. ಆದರೆ ಈಗ ನನ್ನ ಪ್ರಾಣಕ್ಕೇ ಸಂಚು ರೂಪಿಸುತ್ತಿರುವುದರಿಂದ ಇಂದು ಅಧಿಕೃತವಾಗಿ ಪೊಲೀಸ್ ದೂರು ನೀಡುತ್ತಿದ್ದೇನೆ” ಎಂದು ಕಲ್ಲಯ್ಯಜ್ಜನವರು ಎಚ್ಚರಿಸಿದ್ದಾರೆ.
ರಥದ ಗಾಲಿಗೆ ಜಾತಿಯ ಬಣ್ಣ ಹಚ್ಚುವುದು ತರವಲ್ಲ ಇತ್ತೀಚೆಗೆ ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಎತ್ತಿದ್ದ ರಥೋತ್ಸವ ವಿವಾದದ ಕುರಿತು ಮಾತನಾಡಿದ ಶ್ರೀಗಳು, “ವೀರೇಶ್ವರ ಪುಣ್ಯಾಶ್ರಮವು ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಹಾಗೂ ಪುಟ್ಟರಾಜ ಗವಾಯಿಗಳು ಬೆಳೆಸಿದ ಜಾತ್ಯಾತೀತ ಪರಂಪರೆಯ ಮಠ. ಇಲ್ಲಿ ಧರ್ಮದ ಬೇಧವಿಲ್ಲದೆ ಎಲ್ಲರೂ ಕಲಿಯುತ್ತಿದ್ದಾರೆ. ಮಠದ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತಿರುವ ಪೀರಸಾಬ ಕೌತಾಳ ಅವರಿಗೂ ಆಶ್ರಮಕ್ಕೂ ದಶಕಗಳ ಗುರು-ಶಿಷ್ಯರ ಸಂಬಂಧವಿದೆ. ಅವರು ತಮ್ಮ ಸ್ವಂತ ಹಣದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆಯೇ ಹೊರತು ಮಠದಿಂದ ಯಾವುದೇ ಆರ್ಥಿಕ ಸಹಾಯ ಪಡೆಯುತ್ತಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಥೋತ್ಸವವು ಯಾವುದೇ ವಿಘ್ನವಿಲ್ಲದೆ ಸಾಗುತ್ತಿದೆ. ಪೀರಸಾಬ ದಂಪತಿಗಳು ತಮ್ಮ ಭಕ್ತಿಯ ಕಾಣಿಕೆಯಾಗಿ ರಥಕ್ಕೆ ಗಾಲಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಮಠಕ್ಕೆ ಭಕ್ತರು ನೀಡುವ ಕೊಡುಗೆಗಳನ್ನು ಸ್ವೀಕರಿಸುವುದು ಇಲ್ಲಿನ ಪದ್ಧತಿ. ಕೆಲವರು ಹೆಸರು ಬಯಸುತ್ತಾರೆ, ಇನ್ನು ಕೆಲವರು ಗುಪ್ತವಾಗಿ ಸೇವೆ ಸಲ್ಲಿಸುತ್ತಾರೆ. ಇಂತಹ ಪವಿತ್ರ ಧಾರ್ಮಿಕ ಆಚರಣೆಗೆ ಅನಗತ್ಯವಾಗಿ ಕೋಮು ಅಥವಾ ಜಾತಿಯ ಬಣ್ಣ ಹಚ್ಚಿ ಸಮಾಜದಲ್ಲಿ ಗೊಂದಲ ಮೂಡಿಸಬೇಡಿ ಎಂದು ಕಲ್ಲಯ್ಯಜ್ಜನವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಭಾವಮೈದ, ಅಬಕಾರಿ ಜಂಟಿ ಆಯುಕ್ತ ಮಂಜುನಾಥ್ಗೆ ಇಡಿ ಶಾಕ್
