TOP NEWS

ED Raid: ಮೈಸೂರು: ಸಚಿವ ಸತೀಶ್ ಜಾರಕಿಹೊಳಿ ಭಾವಮೈದ, ಅಬಕಾರಿ ಜಂಟಿ ಆಯುಕ್ತ ಮಂಜುನಾಥ್‌ಗೆ ಇಡಿ ಶಾಕ್

ed raid on satish jarkiholi relative in Belagavi

ಮೈಸೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿಯ ಗಂಡ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾದ ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಬಿಗ್ ಶಾಕ್ (ED Raid) ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ (Money Laundering) ಹಾಗೂ ವಿದೇಶದಲ್ಲಿ ಕಾನೂನುಬಾಹಿರವಾಗಿ ಬಂಡವಾಳ ಹೂಡಿಕೆ ಮಾಡಿರುವ ಗಂಭೀರ ದೂರಿನ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ ದೇಶದ ಒಟ್ಟು ಆರು ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಬೆಚ್ಚಿಬೀಳಿಸುವ ಸತ್ಯಗಳನ್ನು ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಆಪ್ತೆ ಯಮುನಾ ವಶಕ್ಕೆ; ಪ್ರಮುಖ ದಾಖಲೆ ಜಪ್ತಿ ಎರಡು ಪ್ರತ್ಯೇಕ ವಾಹನಗಳಲ್ಲಿ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಂಜುನಾಥ್ ಅವರ ನಿವಾಸಕ್ಕೆ ಮುಂಜಾನೆಯೇ ಲಗ್ಗೆ ಇಟ್ಟ ಅಧಿಕಾರಿಗಳ ತಂಡ, ಹಲವು ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಿತು. ಈ ಕಾರ್ಯಾಚರಣೆಯ ವೇಳೆ ಮಂಜುನಾಥ್ ಅವರ ಅತ್ಯಾಪ್ತೆ ಎನ್ನಲಾದ ಯಮುನಾ ಎಂಬುವವರ ಮನೆಯಲ್ಲಿ ಅಕ್ರಮ ದಂಧೆ ಮತ್ತು ಹೂಡಿಕೆಗೆ ಸಂಬಂಧಿಸಿದ ಹಲವಾರು ಪ್ರಮುಖ ದಸ್ತಾವೇಜುಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಯಮುನಾ ಅವರನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ತಮ್ಮದೇ ವಾಹನದಲ್ಲಿ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಕೋಟಿ ಕೋಟಿ ಕಪ್ಪು ಹಣ: ಬೇನಾಮಿ ಬಾರ್ ಜಾಲ ಪತ್ತೆ! ಅಧಿಕಾರಿಗಳು ನಡೆಸಿದ ಈ ಜಂಟಿ ದಾಳಿಯ ವೇಳೆ ಮಂಜುನಾಥ್ ಅವರ ಬೆಂಗಳೂರು ಹಾಗೂ ಬೆಳಗಾವಿ ಮನೆಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಒಪ್ಪಂದ ಪತ್ರಗಳು (Agreements) ಪತ್ತೆಯಾಗಿವೆ. ಮಂಜುನಾಥ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆಯವರ ಹೆಸರಿನಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಭಾಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಾರ್‌ಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಈ ಬೇನಾಮಿ ಉದ್ಯಮದಿಂದ ಬಂದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಅಕ್ರಮ ಮಾರ್ಗದ ಮೂಲಕ ವಿದೇಶಗಳಿಗೆ ವರ್ಗಾಯಿಸಿ ಹೂಡಿಕೆ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಅಂತಾರಾಷ್ಟ್ರೀಯ ಹಣ ವರ್ಗಾವಣೆ ಜಾಲವನ್ನು ಭೇದಿಸಲು ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ರಾಜ್ಯಗಳ ಇಡಿ ಅಧಿಕಾರಿಗಳ ಜಂಟಿ ಪಡೆಯು ಕಾರ್ಯಾಚರಣೆಗೆ ಇಳಿದಿದೆ.

ತುಮಕೂರು ಅಬಕಾರಿ ಎಸ್ಪಿ ಸತೀಶ್ ಕಾಗಲಿ ನಿವಾಸದ ಮೇಲೂ ದಾಳಿ! ಮಂಜುನಾಥ್ ಅವರ ಈ ಕಪ್ಪುಹಣದ ದಂಧೆಗೆ ಅಬಕಾರಿ ಇಲಾಖೆಯ ಒಳಗಿನ ಉನ್ನತ ಅಧಿಕಾರಿಗಳೇ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ. ಮಂಜುನಾಥ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ತುಮಕೂರು ಜಿಲ್ಲೆಯ ಅಬಕಾರಿ ಎಸ್ಪಿ ಸತೀಶ್ ಕಾಗಲಿ ಅವರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಜುನಾಥ್ ಅವರ ವಿದೇಶಿ ಅಕ್ರಮ ವ್ಯವಹಾರಗಳಲ್ಲಿ ಕಾಗಲಿ ಅವರೂ ಪಾಲುದಾರರಾಗಿದ್ದಾರೆ ಎಂಬ ಅನುಮಾನದ ಮೇರೆಗೆ ಬೆಳಗಾವಿಯ ಶ್ರೀನಗರದಲ್ಲಿರುವ ಅವರ ನಿವಾಸ, ಫ್ಲ್ಯಾಟ್ ಹಾಗೂ ಅಥಣಿಯ ಐನಾಪುರದಲ್ಲಿರುವ ಅವರ ಸ್ವಂತ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗುತ್ತಿದೆ. ಸದ್ಯ ರಾಜ್ಯದ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಬೇನಾಮಿ ದಂಧೆ ಇಡಿ ದಾಳಿಯಿಂದಾಗಿ ಸಾರ್ವಜನಿಕವಾಗಿ ಬಯಲಾಗಿದ್ದು, ಅಧಿಕಾರಿಗಳ ವಲಯದಲ್ಲಿ ನಡುಕ ಹುಟ್ಟಿಸಿದೆ.

ಇದನ್ನೂ ಓದಿ: ಕ್ರಾಸ್ ವೋಟಿಂಗ್ ಹಗರಣ: ದ್ರೋಹಿಗಳಿಗೆ ಕಠಿಣ ಶಿಕ್ಷೆ ಗ್ಯಾರಂಟಿ ಎಂದ ಬಿ.ವೈ. ವಿಜಯೇಂದ್ರ!

Leave a Reply

Your email address will not be published. Required fields are marked *