ಕೊಚ್ಚಿ: ಮಲಯಾಳಂ ಚಿತ್ರರಂಗದ ಪ್ರಭಾವಿ ಕಲಾವಿದರ ಸಂಘಟನೆಯಾದ ‘ಅಮ್ಮ’ (AMMA) ಒಳಗೆ ಧಗಧಗಿಸುತ್ತಿದ್ದ ಆಂತರಿಕ ಜಗಳ ಈಗ ಬೀದಿಗೆ ಬಂದಿದೆ. ಜೂನ್ 21ರ ಭಾನುವಾರ ಇಡೀ ಕಾರ್ಯಕಾರಿ ಸಮಿತಿಯೇ ಒಟ್ಟಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಂಘದ ಅಧ್ಯಕ್ಷೆಯಾಗಿದ್ದ ಖ್ಯಾತ ನಟಿ ಶ್ವೇತಾ ಮೆನನ್ (Shwetha Menon) ತಮ್ಮ ಸ್ಥಾನಕ್ಕೆ ಶರಣಾಗಿದ್ದಾರೆ. ಈ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲಿ ತೀಕ್ಷ್ಣವಾದ ಪೋಸ್ಟ್ ಹಾಕಿರುವ ಶ್ವೇತಾ, ಚಿತ್ರರಂಗದೊಳಗಿನ ಗುಂಪುಗಾರಿಕೆ ಹಾಗೂ ಪಿತೂರಿಗಳನ್ನು ಜಗಜ್ಜಾಹೀರುಗೊಳಿಸಿದ್ದಾರೆ. ತಾವು ಯಾರದೇ ಬೆದರಿಕೆಗೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ, ತಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಅಧಿಕಾರದಿಂದ ಹೊರನಡೆದಿದ್ದಾಗಿ ಅವರು ಗುಡುಗಿದ್ದಾರೆ.
ನನ್ನನ್ನು ಕೀಲುಗೊಂಬೆ ಮಾಡಲು ಸಂಚು ನಡೆಸಲಾಗಿತ್ತು! ತಮ್ಮ ರಾಜೀನಾಮೆಗೆ ಅಸಲಿ ಕಾರಣವನ್ನು ಬಿಚ್ಚಿಟ್ಟಿರುವ ಶ್ವೇತಾ ಮೆನನ್, “ಸಂಕಷ್ಟದ ಸಮಯದಲ್ಲಿ ನನ್ನ ಪರ ನಿಂತವರಿಗೆ ಧನ್ಯವಾದಗಳು. ಆದರೆ ಸತ್ಯ ಏನೆಂಬುದು ಜನರಿಗೆ ನೇರವಾಗಿ ತಿಳಿಯಬೇಕಿದೆ. ನಾನು ಯಾರ ಕೈಯಲ್ಲೂ ಗೊಂಬೆಯಾಗಿ ಆಡಲು ಸಿದ್ಧವಿಲ್ಲದ ಕಾರಣಕ್ಕೇ ಈ ನಿರ್ಧಾರಕ್ಕೆ ಬಂದೆ. ನಾನು ‘ಅಮ್ಮ’ ಸಂಘದ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೇ ಮಾರ್ಟಿನ್ ಮೆನಾಚೇರಿ ಹಾಗೂ ಕ್ರೈಂ ನಂದಕುಮಾರ್ ಅವರಂತಹ ವ್ಯಕ್ತಿಗಳನ್ನು ಬಳಸಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಆದರೂ ಸದಸ್ಯರ ಬಹುಮತದೊಂದಿಗೆ ನಾನು ಗೆದ್ದು ಬಂದೆ. ಆದರೆ, ಸಂಘದ ಹಿಂದಿನ ಸಮಿತಿಯಲ್ಲಿದ್ದ ಕೆಲವು ಪ್ರಭಾವಿಗಳು ಮಾಡಿದ್ದ ಅವ್ಯವಹಾರ ಮತ್ತು ತಪ್ಪುಗಳನ್ನು ತನಿಖೆ ಮಾಡಲು ನಮಗೆ ಸತತವಾಗಿ ಅಡ್ಡಿಪಡಿಸಲಾಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಣಕಾಸು ವ್ಯವಹಾರಗಳ ವಿಧಿವಿಜ್ಞಾನ ಆಡಿಟ್ಗೆ ಆಗ್ರಹ ಸಂಘಟನೆಯ ಆರ್ಥಿಕ ಶಿಸ್ತಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು, ಸಾರ್ವಜನಿಕವಾಗಿ ಪಾರದರ್ಶಕತೆ ತರಲು ನಮ್ಮ ಅಧಿಕಾರಾವಧಿ ಸೇರಿದಂತೆ ಕಳೆದೆರಡು ಅವಧಿಗಳ ಎಲ್ಲಾ ಬ್ಯಾಂಕ್ ಖಾತೆಗಳು ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆ ಸಮಗ್ರ ವಿಧಿವಿಜ್ಞಾನ ಆಡಿಟ್ (Forensic Audit) ನಡೆಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಯಾವುದೇ ರಾಜಕೀಯ ಲೇಪನ ಹಚ್ಚಬೇಡಿ ಎಂದಿರುವ ಶ್ವೇತಾ, ತಮಗೆ ಬಿಜೆಪಿ ಅಥವಾ ಎಡಪಂಥೀಯರ ಸಿದ್ಧಾಂತಗಳ ಜೊತೆ ಯಾವುದೇ ನಂಟಿಲ್ಲ, ತಮ್ಮದು ಸದಾ ತಟಸ್ಥ ನಿಲುವು ಎಂದಿದ್ದಾರೆ. ಅಲ್ಲದೆ, “ಟ್ವಿಸ್ಟ್ ಇಲ್ಲಿಗೆ ಮುಗಿದಿಲ್ಲ, ಅಸಲಿ ಸಿನಿಮಾ ಇನ್ಮುಂದೆ ಇದೆ” ಎಂದು ಬರೆಯುವ ಮೂಲಕ ತಾವಿನ್ನೂ ಹೋರಾಟ ನಿಲ್ಲಿಸಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ.
ಈ ಹಿಂದೆಯೂ ಶ್ವೇತಾ ಮೆನನ್ ಅವರ ಹಾದಿಗೆ ಹಲವು ಮುಳ್ಳುಗಳನ್ನು ಹಾಸಲಾಗಿತ್ತು. ಅವರು ಹತ್ತು ವರ್ಷಗಳ ಹಿಂದೆ ನಟಿಸಿದ್ದ ಸಿನಿಮಾಗಳನ್ನು ಮುಂದಿಟ್ಟುಕೊಂಡು 2025ರ ಸೆಪ್ಟೆಂಬರ್ನಲ್ಲಿ ಅವರ ಮೇಲೆ ಅಶ್ಲೀಲತೆಯ ಕೇಸ್ ದಾಖಲಿಸಲಾಗಿತ್ತು. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಅವರು ಅಂದೇ ವೇದಿಕೆಯೊಂದರಲ್ಲಿ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ, ಕಳೆದ ಮೇ ತಿಂಗಳಲ್ಲಿ ಶ್ರೀ ಮಹಾದೇವ ಟೆಂಪಲ್ ಟ್ರಸ್ಟ್ನಿಂದ ಸಂಘಟನೆಗೆ ಬಂದಿದ್ದ ಪ್ರಾಯೋಜಕತ್ವದ ಹಣದ ವಿಚಾರದಲ್ಲೂ ದೊಡ್ಡ ವಿವಾದ ಎದ್ದಿತ್ತು. ಆ ಸಂದರ್ಭದಲ್ಲೂ ಸಂಘಟನೆಯನ್ನು ಬೆಂಬಲಿಸಿದ್ದ ಶ್ವೇತಾ, ಇದೊಂದು ಧರ್ಮದರ್ಶಿ ಸಂಸ್ಥೆಯಾಗಿದ್ದು ಹಣದ ಹಿಂದೆ ರಾಜಕೀಯ ಹುಡುಕುವುದು ತಪ್ಪು ಎಂದು ವಾದಿಸಿದ್ದರು. ಸದ್ಯ ಶ್ವೇತಾ ಮೆನನ್ ಅವರ ಈ ಆಕ್ರೋಶಭರಿತ ನಡೆ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ನವಿಲು ಗರಿ ರೀಲ್ಸ್ ವಿವಾದ: ಕ್ಷಮೆ ಕೇಳಿದ ನಿವೇದಿತಾ ಗೌಡ – ಕಿಶನ್!
