TOP NEWS

Monsoon Health: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಟಿಪ್ಸ್‌ ಫಾಲೋ ಮಾಡಿ

Monsoon health tips everyone must follow

ಬೇಸಿಗೆಯ ಕಡು ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ಮಳೆಗಾಲವು ತಂಪಾದ ಅನುಭವ ಮತ್ತು ಸಂತೋಷವನ್ನು ತರುತ್ತದೆ. ಮಕ್ಕಳು ಹಾಗೂ ಹಿರಿಯರು ಎಲ್ಲರೂ ಮುಂಗಾರಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಆದರೆ, ಈ ಸುಂದರ ಹವಾಮಾನದ ಜೊತೆಗೆ ವೈರಸ್ ಮತ್ತು ವಿವಿಧ ರೀತಿಯ ಸೋಂಕುಗಳ ಅಪಾಯವೂ ಅಷ್ಟೇ ಹೆಚ್ಚಾಗಿರುತ್ತದೆ. ಫೋರ್ಟಿಸ್ ಆಸ್ಪತ್ರೆಯ ಆರೋಗ್ಯ ತಜ್ಞರ ಪ್ರಕಾರ, ಮಳೆಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕೊಂಚ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ಜ್ವರ, ಫ್ಲೂ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಮುಖ್ಯವಾಗಿ ನೀರಿನಿಂದ ಹರಡುವ ರೋಗಗಳು ವೇಗವಾಗಿ ಹರಡುತ್ತವೆ. ಜ್ವರ ಬರುವುದು ದೇಹಕ್ಕೆ ಯಾವುದೋ ಸೋಂಕು ತಗುಲಿದೆ ಎಂಬುದರ ಲಕ್ಷಣವಾಗಿದೆ. ಹೀಗಾಗಿ ಈ ದಿನಗಳಲ್ಲಿ ಸಣ್ಣ ಪುಟ್ಟ ಮುನ್ನೆಚ್ಚರಿಕೆಗಳನ್ನು ವಹಿಸುವುದರಿಂದ ಇಡೀ ಕುಟುಂಬವನ್ನು ಕಾಯಿಲೆಗಳಿಂದ ದೂರವಿಟ್ಟು ಮಳೆಗಾಲವನ್ನು (Monsoon Health) ಸವಿಯಬಹುದು.

ಶುದ್ಧವಾದ ನೀರು ಕುಡಿಯಬೇಕು

ಮಳೆಗಾಲದಲ್ಲಿ ಸುರಕ್ಷಿತವಾಗಿರಲು ಮೊದಲು ಮಾಡಬೇಕಾದ ಕೆಲಸವೆಂದರೆ ಶುದ್ಧ ಹಾಗೂ ಕಾಯಿಸಿ ಆರಿಸಿದ ನೀರನ್ನು ಕುಡಿಯುವುದು. ಈ ಹವಾಮಾನದಲ್ಲಿ ನೀರಿನ ಮೂಲಗಳು ಸುಲಭವಾಗಿ ಕಲುಷಿತಗೊಳ್ಳುವುದರಿಂದ ನೀರನ್ನು ಚೆನ್ನಾಗಿ ಕುದಿಸಿ ಕುಡಿಯುವುದು ಅಥವಾ ಫಿಲ್ಟರ್ ನೀರನ್ನು ಬಳಸುವುದು ಉತ್ತಮ. ಎಲ್ಲಾದರೂ ಪ್ರಯಾಣಿಸುವಾಗ ಮನೆಯಿಂದಲೇ ನೀರನ್ನು ಕೊಂಡೊಯ್ಯುವುದು ಅಥವಾ ಸೀಲ್ ಮಾಡಿದ ನೀರಿನ ಬಾಟಲಿಗಳನ್ನು ಖರೀದಿಸುವುದು ಸೂಕ್ತ. ಇದರೊಂದಿಗೆ ಹೊರಗಿನ ರಸ್ತೆ ಬದಿಯ ಆಹಾರ ಹಾಗೂ ಜಂಕ್ ಫುಡ್‌ಗಳಿಂದ ಸಂಪೂರ್ಣವಾಗಿ ದೂರವಿರಬೇಕು. ತೆರೆದಿಟ್ಟ ಆಹಾರ ಪದಾರ್ಥಗಳು ಮತ್ತು ಕತ್ತರಿಸಿಟ್ಟ ಹಣ್ಣುಗಳ ಮೇಲೆ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಬೇಗನೆ ಬೆಳೆಯುವುದರಿಂದ ಇವುಗಳನ್ನು ಸೇವಿಸಿದರೆ ಕಾಯಿಲೆ ಬೀಳುವುದು ಖಚಿತ. ಮನೆಗೆ ತಂದ ಹಣ್ಣು ಮತ್ತು ತರಕಾರಿಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದೇ ಬಳಸಬೇಕು ಮತ್ತು ಮಳೆಗಾಲದಲ್ಲಿ ರಸ್ತೆ ಬದಿಯ ಹಸಿ ಸಲಾಡ್‌ಗಳನ್ನು ತಿನ್ನಬಾರದು.

ನೀರು ನಿಲ್ಲದಂತೆ ಗಮನ ಹರಿಸಿ

ಆರೋಗ್ಯದ ದೃಷ್ಟಿಯಿಂದ ಮನೆಯ ಸುತ್ತಮುತ್ತಲಿನ ಸ್ವಚ್ಛತೆಯೂ ಅಷ್ಟೇ ಮುಖ್ಯವಾಗಿದೆ. ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಏಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ತಾಣವಾಗಲಿದ್ದು ಡೆಂಗ್ಯೂ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ಕುಡಿಯುವ ನೀರನ್ನು ಯಾವಾಗಲೂ ಮುಚ್ಚಿಡಬೇಕು ಮತ್ತು ಹತ್ತಿರದ ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗುವಂತೆ ನೋಡಿಕೊಳ್ಳಬೇಕು. ಇದರೊಂದಿಗೆ ದಿನನಿತ್ಯದ ಜೀವನಶೈಲಿಯಲ್ಲಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ರಾತ್ರಿ ವೇಳೆ ಸರಿಯಾದ ನಿದ್ದೆ ಮಾಡದಿರುವುದು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ, ಆದ್ದರಿಂದ ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡುವುದು ಅತ್ಯಗತ್ಯ. ಮಳೆಯಿಂದಾಗಿ ಹೊರಗೆ ವಾಕಿಂಗ್ ಹೋಗಲು ಸಾಧ್ಯವಾಗದಿದ್ದರೂ ಯೋಗ ಅಥವಾ ಮನೆಯೊಳಗೇ ಮಾಡಬಹುದಾದ ಸುಲಭ ವ್ಯಾಯಾಮಗಳನ್ನು ಮುಂದುವರಿಸಬೇಕು. ಇದು ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ರೋಗಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ.

ವೈಯಕ್ತಿಕ ಸ್ವಚ್ಛತೆಯ ಭಾಗವಾಗಿ ಊಟಕ್ಕೆ ಮುಂಚೆ ಹಾಗೂ ಹೊರಗಿನಿಂದ ಬಂದಾಗ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಏಕೆಂದರೆ ಈ ಹವಾಮಾನದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡುತ್ತವೆ. ಕೊನೆಯದಾಗಿ, ಮಳೆಯಲ್ಲಿ ಪದೇ ಪದೇ ನೆನೆಯುವುದನ್ನು ತಪ್ಪಿಸಬೇಕು. ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಹಠಾತ್ ಮಳೆಗೆ ಸಿಲುಕುವುದು ಸಾಮಾನ್ಯವಾಗಿದ್ದರೂ, ಹೊರಗೆ ಹೋಗುವಾಗ ಯಾವಾಗಲೂ ಛತ್ರಿ ಅಥವಾ ರೇನ್‌ಕೋಟ್ ಜೊತೆಯಲ್ಲಿಟ್ಟುಕೊಳ್ಳುವುದು ಜ್ವರ ಮತ್ತು ಶೀತದಿಂದ ನಮ್ಮನ್ನು ರಕ್ಷಿಸುತ್ತದೆ. ಸ್ವಲ್ಪ ಜಾಗರೂಕತೆಯಿಂದ ಇದ್ದರೆ ಮಳೆಗಾಲದ ಸೌಂದರ್ಯವನ್ನು ಆನಂದಿಸುತ್ತಾ ಆರೋಗ್ಯವಾಗಿಯೂ ಇರಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಅಸಿಡಿಟಿ ಸಮಸ್ಯೆಗೆ ಅಡುಗೆಮನೆಯಲ್ಲೇ ಇದೆ ಮದ್ದು

Leave a Reply

Your email address will not be published. Required fields are marked *