TOP NEWS

Actor Darshan: ಥಿಯೇಟರ್‌ಗಳಲ್ಲಿ ಮತ್ತೆ ‘ಡಿ ಬಾಸ್’ ಹವಾ: 20 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ರೀ-ರಿಲೀಸ್‌ಗೆ ಪ್ರಸನ್ನ ಚಿತ್ರಮಂದಿರ ಹೌಸ್‌ಫುಲ್!

sandalwood actor darshan kalasipalya re release

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (‌Actor Darshan) ಅಭಿನಯದ ಸ್ಯಾಂಡಲ್‌ವುಡ್‌ನ ಗರಂ ಆ್ಯಕ್ಷನ್ ಸಿನಿಮಾ ‘ಕಲಾಸಿಪಾಳ್ಯ’ ಜೂನ್ 19ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಗಳು ಈ ಚಿತ್ರದ ಮರು-ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಗಜಮಾಲೆ ಹಾಕಿ, ಪಟಾಕಿಗಳ ಸರವನ್ನೇ ಸಿಡಿಸಿ ಚಿತ್ರಪ್ರೇಮಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್ ಮಾಸ್ ಎಂಟ್ರಿ ನೀಡುತ್ತಿದ್ದಂತೆ ಚಿತ್ರಮಂದಿರದ ತುಂಬೆಲ್ಲಾ ಸೀಟಿಗಳ ಸದ್ದು ಮೊಳಗಿದ್ದು, ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿದೆ.

ಥಿಯೇಟರ್‌ನಲ್ಲಿ ಕುಣಿದ ಫ್ಯಾನ್ಸ್

ಮುಖ್ಯವಾಗಿ ಚಿತ್ರದ ಎವರ್‌ಗ್ರೀನ್ ಹಿಟ್ ಸಾಂಗ್ ‘ಧೂಳ್ ಮಗ ಧೂಳ್’ ಹಾಡು ಪ್ರದರ್ಶನಗೊಳ್ಳುತ್ತಿದ್ದಂತೆ ಥಿಯೇಟರ್ ಒಳಗೆ ಒಂದು ಕ್ಷಣ ಹೈಡ್ರಾಮಾವೇ ಸೃಷ್ಟಿಯಾಗಿದೆ. ದರ್ಶನ್ ಅವರ ಕಲ್ಟ್ ಅಭಿಮಾನಿಗಳು ಸೀಟು ಬಿಟ್ಟು ಎದ್ದು ಬಂದು ಸ್ಕ್ರೀನ್ ಮುಂಭಾಗದಲ್ಲಿ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ. ತೆರೆ ಮೇಲಿನ ಸಾಹಿತ್ಯದ ಜೊತೆಗೆ ಇಡೀ ಥಿಯೇಟರ್ ಒಂದಾಗಿ ಹಾಡನ್ನು ಜೋರಾಗಿ ಹಾಡಿರುವುದು ಎಲ್ಲರ ಗಮನ ಸೆಳೆದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿಗಳು, ನಮ್ಮ ನಾಯಕ ಎಲ್ಲೇ ಇದ್ದರೂ ಅವರ ಮೇಲಿರುವ ಕ್ರೇಜ್ ಮತ್ತು ಪ್ರೀತಿ ಎಳ್ಳಷ್ಟೂ ಕಮ್ಮಿಯಾಗುವುದಿಲ್ಲ, ನಾವು ಅವರನ್ನು ಯಾವುದೇ ಪರಿಸ್ಥಿತಿಯಲ್ಲೂ ಬಿಟ್ಟುಕೊಡುವುದಿಲ್ಲ ಎಂದು ಭಾವುಕರಾಗಿದ್ದಾರೆ. ಇನ್ನೂ ನೂರು ವರ್ಷ ಕಳೆದರೂ ‘ಡಿ ಬಾಸ್’ ಸೃಷ್ಟಿಸಿರುವ ಸಾಮ್ರಾಜ್ಯ ಕುಸಿಯುವುದಿಲ್ಲ ಎಂದು ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದಾರೆ.

ಪ್ರಸನ್ನ ಚಿತ್ರಮಂದಿರದಲ್ಲಿ ಚಿತ್ರದ ಎಲ್ಲಾ ಶೋಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗಿದ್ದು, ದರ್ಶನ್ ಅವರ ಹಳೆಯ ಸಿನಿಮಾಗಳಿಗೆ ಇಂದಿಗೂ ಇರುವ ಭರ್ಜರಿ ಮಾರುಕಟ್ಟೆಯನ್ನು ಸಾಬೀತುಪಡಿಸಿದೆ. ಮಧ್ಯರಾತ್ರಿ 1 ಗಂಟೆಗೆ ವಿಶೇಷ ಪ್ರದರ್ಶನ ಏರ್ಪಡಿಸಿದರೂ ನಾವು ಚಿತ್ರಮಂದಿರಕ್ಕೆ ಬರಲು ಸದಾ ಸಿದ್ಧ ಎಂದು ಅಭಿಮಾನಿಗಳು ತಮ್ಮ ಕ್ರೇಜ್ ತೋರ್ಪಡಿಸಿದ್ದಾರೆ. 2004 ರ ಅಕ್ಟೋಬರ್ 15 ರಂದು ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಆ್ಯಕ್ಷನ್ ಕಟ್ ಹೇಳಿದ್ದರು. ನಟಿ ರಕ್ಷಿತಾ ಪ್ರೇಮ್ ನಾಯಕಿಯಾಗಿ ಅಬ್ಬರಿಸಿದ್ದ ಈ ಮಾಸ್ ಚಿತ್ರವನ್ನು ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಸಾಹಸಿ ನಿರ್ಮಾಪಕ ಕೋಟಿ ರಾಮು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರು. ಬಿಡುಗಡೆಯಾಗಿ ಎರಡು ದಶಕಗಳೇ ಉರುಳಿದರೂ, ಸಾಧು ಕೋಕಿಲಾ ಅವರ ರಗಡ್ ಮ್ಯೂಸಿಕ್ ಮತ್ತು ಚಿತ್ರದ ಸಂಭಾಷಣೆಗಳು ಇಂದಿನ ತಲೆಮಾರಿನ ಪ್ರೇಕ್ಷಕರನ್ನೂ ಮಂತ್ರಮುಗ್ಧರನ್ನಾಗಿಸುತ್ತಿವೆ.

ಇದನ್ನೂ ಓದಿ: ‘3 ಈಡಿಯಟ್ಸ್’ ಸೀಕ್ವೆಲ್ ಕಥೆ ಕೇಳಿ ಫಿದಾ ಆದ ಅಮೀರ್ ಖಾನ್: ಕಥೆ ಬಿಚ್ಚಿಟ್ಟ ರಾಜ್‌ಕುಮಾರ್ ಹಿರಾನಿ!

Leave a Reply

Your email address will not be published. Required fields are marked *