TOP NEWS

Narendra Modi: ನೆಹರು ದಾಖಲೆ ಮುರಿದ ನಮೋ: ಭಾರತದ ಇತಿಹಾಸದಲ್ಲೇ ಸತತ ಸುದೀರ್ಘ ಅವಧಿಯ ಪ್ರಧಾನಿಯಾಗಿ ನರೇಂದ್ರ ಮೋದಿ ಹೊಸ ಮೈಲಿಗಲ್ಲು

narendra modi broke jawaharlal nehru record of long term pm in Indian history

ನವದೆಹಲಿ: ಕಳೆದ 2014 ರ ಮೇ 26 ರಂದು ದೇಶದ ಚುಕ್ಕಾಣಿ ಹಿಡಿದಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಜೂನ್ 10) ಭಾರತೀಯ ರಾಜಕೀಯ ರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವಿಶಿಷ್ಟ ಇತಿಹಾಸ ಸೃಷ್ಟಿಸಿದ್ದಾರೆ. ದೇಶದಲ್ಲೇ ಅತ್ಯಂತ ಸುದೀರ್ಘ ಕಾಲ ನಿರಂತರವಾಗಿ ಆಡಳಿತ ನಡೆಸಿದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಧಾನಿ ಪೀಠದಲ್ಲಿ ಸತತವಾಗಿ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನೆಹರು ಅವರು 1952 ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಸತತ 4,398 ದಿನಗಳ ಕಾಲ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. ಈ ಐತಿಹಾಸಿಕ ಸಾಧನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆ ಮತ್ತು ಕರ್ತವ್ಯದ ಶ್ರೇಷ್ಠತೆಯನ್ನು ಸ್ಮರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರಧಾನಿ ಹಂಚಿಕೊಂಡ ನುಡಿಮುತ್ತುಗಳು ಈ ಅಪೂರ್ವ ಮೈಲಿಗಲ್ಲು ತಲುಪಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಜನರ ನಂಬಿಕೆಯನ್ನು ಕೇವಲ ನಿಸ್ವಾರ್ಥ ಸೇವೆ ಹಾಗೂ ಸಾರ್ವಜನಿಕರ ಮೇಲಿನ ಅಪಾರ ಸಮರ್ಪಣಾ ಭಾವದಿಂದ ಮಾತ್ರ ಗಳಿಸಲು ಸಾಧ್ಯ. ಸಾರ್ವಜನಿಕ ಸೇವೆಯೇ ಸುಶಾಸನದ ಅತಿ ದೊಡ್ಡ ಮಾಪನವಾಗಿದೆ. ಯಾರು ವಿನಯ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆಯೊಂದಿಗೆ ನಿರಂತರವಾಗಿ ಶ್ರಮಿಸುತ್ತಾರೋ, ಅಂತಹ ವ್ಯಕ್ತಿ ಮಾತ್ರ ಸಾರ್ವಜನಿಕರ ಅಚಲ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ” ಎಂದು ಬರೆದುಕೊಂಡಿದ್ದಾರೆ. ನಾಯಕತ್ವದ ಗುಣಗಳನ್ನು ಸಾರುವ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿರುವ ಅವರು, ಯಾರ ಸ್ವಭಾವವು ಜನಸೇವೆಗೆ ಮುಡಿಪಾಗಿದೆಯೋ ಮತ್ತು ಯಾರು ಸದಾ ಪ್ರಜೆಗಳ ಹಿತವನ್ನೇ ಬಯಸುತ್ತಾರೋ, ಅಂತಹ ನಮ್ರತೆಯುಳ್ಳ ರಾಜನೇ ಜಗತ್ತಿನಲ್ಲಿ ಪರಮ ವೈಭವ ಹಾಗೂ ಕೀರ್ತಿಯನ್ನು ಗಳಿಸುತ್ತಾನೆ ಎಂದು ಹೇಳಿದ್ದಾರೆ.

ದೇಶದಾದ್ಯಂತ ಹರಿದುಬಂದ ಹಾರೈಕೆಗಳ ಮಹಾಪೂರ ಪ್ರಧಾನಿ ಮೋದಿಯವರ ಈ ಅಭೂತಪೂರ್ವ ಯಶಸ್ಸಿಗೆ ದೇಶ-ವಿದೇಶಗಳ ಪ್ರಮುಖ ನಾಯಕರಿಂದ ಅಭಿನಂದನೆಗಳು ಮಹಾಪೂರ ಹರಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಪಿಎಂ ಮೋದಿಯವರ 12 ವರ್ಷಗಳ ಆಡಳಿತಾವಧಿಯು ಭಾರತದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮರುಸ್ಥಾಪಿಸಿದೆ. ಸಾಂಸ್ಕೃತಿಕ ಪುನರುತ್ಥಾನವನ್ನು ತರುವ ಜೊತೆಗೆ ದೇಶವನ್ನು ದಾಸ್ಯದ ಮನಸ್ಥಿತಿಯಿಂದ ಮುಕ್ತಗೊಳಿಸುವಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ” ಎಂದು ಶ್ಲಾಘಿಸಿದ್ದಾರೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲೇಖನವೊಂದರ ಮೂಲಕ ಶುಭ ಹಾರೈಸಿದ್ದು, “ಪ್ರಧಾನಿ ಮೋದಿ ಅವರು ಭಾರತದ ಜನರಿಗೆ ಕೇವಲ ಜನಪರ ಯೋಜನೆಗಳನ್ನು ಮಾತ್ರ ನೀಡಿಲ್ಲ. ಬದಲಿಗೆ ದೇಶಕ್ಕೆ ಒಂದು ಸ್ಪಷ್ಟ ಗುರಿ, ವಿಶಾಲವಾದ ದೃಷ್ಟಿಕೋನ ಮತ್ತು ಆತ್ಮವಿಶ್ವಾಸದಿಂದ ಕೂಡಿದ ರಾಷ್ಟ್ರೀಯ ಸಂಕಲ್ಪವನ್ನು ಧಾರೆ ಎರೆದಿದ್ದಾರೆ” ಎಂದು ಬಣ್ಣಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೋದಿಯವರನ್ನು ರಾಷ್ಟ್ರಪ್ರೇಮದ ತತ್ವದಡಿ ಸಾಗುತ್ತಿರುವ ದಣಿವರಿಯದ ‘ಕರ್ಮಯೋಗಿ’ ಎಂದು ಕೊಂಡಾಡಿದ್ದಾರೆ.

ವಿಶ್ವ ನಾಯಕರಿಂದಲೂ ನಮೋ ಸಾಧನೆಗೆ ಜೈಕಾರ ಕೇವಲ ಭಾರತದ ನಾಯಕರು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಗಣ್ಯರೂ ಸಹ ಮೋದಿಯವರ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಮೋದಿಯವರು ನೀಡಿದ ಕೊಡುಗೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಅವರು, “ಭಾರತದ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಜನರಿಂದ ಚುನಾಯಿತರಾದ ಪ್ರಧಾನಿಯಾಗಿ ದಾಖಲೆ ಬರೆದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆಯು ಅವರ ದಶಕಗಳ ಸಾರ್ವಜನಿಕ ಸೇವೆ ಮತ್ತು ಅಪ್ರತಿಮ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಡಬಲ್ ಶಾಕ್: ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರದ ಸಮ್ಮತಿ!

Leave a Reply

Your email address will not be published. Required fields are marked *