TOP NEWS

Shubha Poonja: ಶುಭಾ ಪೂಂಜಾ ಡಿವೋರ್ಸ್ ಕೇಸ್, ಮೌನ ಮುರಿದು ಸಮಯ ಕೇಳಿದ ನಟಿ

actress Shubha Poonja post about her divorce

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ (Shubha Poonja) ಅವರ ವೈವಾಹಿಕ ಬದುಕಿನ ಏರುಪೇರುಗಳು ಸದ್ಯ ಗಾಂಧಿನಗರದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳು ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದವು. ಈ ಎಲ್ಲಾ ಚರ್ಚೆಗಳಿಗೆ ಇದುವರೆಗೆ ಪ್ರತಿಕ್ರಿಯಿಸದ ಶುಭಾ, ಈಗ ಕೊನೆಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಸಾರ್ವಜನಿಕವಾಗಿ ರಿಯಾಕ್ಟ್ ಮಾಡಿದ್ದು, ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳಲ್ಲಿ ಮಹತ್ವದ ಮನವಿಯೊಂದನ್ನು ಮಂಡಿಸಿದ್ದಾರೆ.

ಜಾಲತಾಣದಲ್ಲಿ ಶುಭಾ ಹಂಚಿಕೊಂಡ ಭಾವುಕ ಸಂದೇಶ

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಪುಟಗಳಲ್ಲಿ ಬರೆದುಕೊಂಡಿರುವ ನಟಿ ಶುಭಾ ಪೂಂಜಾ, “ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಿಂದ ಇಂದಿನವರೆಗೂ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನೀವೆಲ್ಲರೂ ನನಗೆ ಬೆಂಬಲ ನೀಡುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ನಿಮ್ಮ ಈ ಪ್ರೀತಿಗೆ ನಾನು ಸದಾ ಚಿರಋಣಿ. ಇದೀಗ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ, ಸೂಕ್ತ ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ಸದ್ಯ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯ ಬಗ್ಗೆ ನಾನೇ ಖುದ್ದಾಗಿ ನಿಮ್ಮ ಮುಂದೆ ಬಂದು ಎಲ್ಲವನ್ನೂ ಸ್ಪಷ್ಟಪಡಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಖಾಸಗಿ ಸಮಯಾವಕಾಶ ಕೊಡಿ” ಎಂದು ವಿನಂತಿಸಿಕೊಂಡಿದ್ದಾರೆ.

ನಟಿ ಈ ಪೋಸ್ಟ್ ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಆಪ್ತ ಬಳಗ ಅವರ ಬೆಂಬಲಕ್ಕೆ ನಿಂತಿದೆ. “ಇದು ನಿಮ್ಮ ವೈಯಕ್ತಿಕ ಬದುಕು, ನಿಮ್ಮ ಖಾಸಗಿತನವನ್ನು ನಾವು ಗೌರವಿಸುತ್ತೇವೆ. ನೀವು ಯಾವುದೇ ನಿರ್ಧಾರ ಕೈಗೊಂಡರೂ ನಾವು ನಿಮ್ಮ ಜೊತೆಗಿರುತ್ತೇವೆ, ಧೃತಿಗೆಡಬೇಡಿ” ಎಂದು ಅಭಿಮಾನಿಗಳು ಕಮೆಂಟ್ಸ್ ಮೂಲಕ ಧೈರ್ಯ ತುಂಬುತ್ತಿದ್ದಾರೆ.

ಇಂದು ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಲಿದ್ದಾರಾ ದಂಪತಿ?

ನಂಬಲರ್ಹ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ನಟಿ ಶುಭಾ ಪೂಂಜಾ ಹಾಗೂ ಪತಿ ಸುಮಂತ್ ಅವರು ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ (Family Court) ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಇಂದು ಪ್ರಮುಖ ವಿಚಾರಣೆ (Hearing) ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಬಹುಕಾಲದ ಆಪ್ತ ಗೆಳೆಯ ಹಾಗೂ ಉದ್ಯಮಿಯೂ ಆಗಿರುವ ಸುಮಂತ್ ಬಿಲ್ಲವ ಅವರನ್ನು ಶುಭಾ ಪೂಂಜಾ ಅವರು ೨೦೨೨ ರ ಜನವರಿ 5 ರಂದು ಮದುವೆಯಾಗಿದ್ದರು. ಆ ಸಮಯದಲ್ಲಿ ಕೋವಿಡ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದ ಕಾರಣ, ಮಂಗಳೂರಿನ ಮಜಲುಬೆಟ್ಟು ಬೀಡಿನಲ್ಲಿ ಕೇವಲ ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಇವರ ವಿವಾಹ ನೆರವೇರಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 8’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾಗಲೂ ಶುಭಾ ಪೂಂಜಾ ಅವರು ಸುಮಂತ್ ಜೊತೆಗಿನ ತಮ್ಮ ಪ್ರೀತಿಯ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಆದರೆ ಈಗ ಮದುವೆಯಾದ ನಾಲ್ಕೇ ವರ್ಷಕ್ಕೆ ಈ ಜೋಡಿ ವಿಚ್ಛೇದನದ ಹಾದಿ ಹಿಡಿದಿರುವುದು ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.

ಇದನ್ನೂ ಓದಿ: ಹಾಲಿವುಡ್ ಅಂಗಣದಲ್ಲಿ ರಾಕಿ ಭಾಯ್ ಮಾಸ್ಟರ್ ಪ್ಲಾನ್: ‘ಟಾಕ್ಸಿಕ್’ ವರ್ಲ್ಡ್‌ವೈಡ್ ಬಿಸಿನೆಸ್‌ಗಾಗಿ ಯುಎಸ್‌ಗೆ ಹಾರಿದ ಯಶ್!

Leave a Reply

Your email address will not be published. Required fields are marked *