ಬೆಂಗಳೂರು: ದೇಶದಲ್ಲಿ ಈಗಾಗಲೇ ಕ್ಯಾನ್ಸರ್ (Cancer) ಚಿಕಿತ್ಸೆಯ ಭಾರಿ ವೆಚ್ಚದಿಂದ ಕಂಗಾಲಾಗಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಅತ್ಯಗತ್ಯವಾಗಿ ಬೇಕಾಗುವ ಕೆಲವು ಪ್ರಮುಖ ಕ್ಯಾನ್ಸರ್ ಔಷಧಿಗಳ ದರವನ್ನು ಹೆಚ್ಚಿಸಲು ಸರ್ಕಾರ ಮುದ್ರೆ ಒತ್ತಿದೆ. ಆದರೆ, ಈ ನಿರ್ಧಾರದ ಹಿಂದೆ ಮಾರುಕಟ್ಟೆಯಲ್ಲಿ ಉಂಟಾಗಿರುವ ಜೀವರಕ್ಷಕ ಔಷಧಿಗಳ ತೀವ್ರ ಅಭಾವವೇ ಮುಖ್ಯ ಕಾರಣ ಎಂದು ಹೇಳಲಾಗಿದೆ.
ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಕೀಮೋಥೆರಪಿಗೆ ಬಳಸುವ ಅತ್ಯಗತ್ಯ ಔಷಧಿಗಳ ಸ್ಟಾಕ್ ಖಾಲಿಯಾಗುತ್ತಾ ಬಂದಿದ್ದು, ರೋಗಿಗಳ ಚಿಕಿತ್ಸೆಗೆ ದೊಡ್ಡ ಮಟ್ಟದ ಅಡ್ಡಿ ಉಂಟಾಗಿದೆ. ಈ ತುರ್ತು ಪರಿಸ್ಥಿತಿಯನ್ನು ಸರಿಪಡಿಸಲು ಹಾಗೂ ಔಷಧ ತಯಾರಿಕಾ ಕಂಪನಿಗಳು ಪೂರೈಕೆಯನ್ನು ಮತ್ತೆ ಮೊದಲಿನಂತೆ ಆರಂಭಿಸುವಂತೆ ಮಾಡಲು ಕೇಂದ್ರ ಸರ್ಕಾರವು ಅನಿವಾರ್ಯವಾಗಿ ಈ ಬೆಲೆ ಏರಿಕೆಯ ಹೆಜ್ಜೆಯನ್ನಿಟ್ಟಿದೆ.
ಕಣ್ಮರೆಯಾಗಿವೆ ಕೀಮೋಥೆರಪಿಯ ಮುಖ್ಯ ಔಷಧಿಗಳು
ಕ್ಯಾನ್ಸರ್ ಚಿಕಿತ್ಸೆಯ ಬೆನ್ನೆಲುಬು ಎನಿಸಿಕೊಂಡಿರುವ ಪ್ಲಾಟಿನಂ ಆಧಾರಿತ ಕೀಮೋಥೆರಪಿ ಔಷಧಿಗಳಾದ ‘ಸಿಸ್ಪ್ಲಾಟಿನ್’ (Cisplatin) ಮತ್ತು ‘ಕಾರ್ಬೋಪ್ಲಾಟಿನ್’ (Carboplatin) ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಶ್ವಾಸಕೋಶ, ಅಂಡಾಶಯ, ಗರ್ಭಕಂಠ, ಮೂತ್ರಕೋಶ ಹಾಗೂ ಕುತ್ತಿಗೆ ಭಾಗದ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲು ಇವೇ ಪ್ರಮುಖ ಜೀವರಕ್ಷಕ ಮದ್ದುಗಳಾಗಿವೆ. ಇವುಗಳಿಗೆ ಸಮನಾದ ಬೇರೆ ಪರ್ಯಾಯ ಔಷಧಿಗಳು ಲಭ್ಯವಿಲ್ಲದ ಕಾರಣ, ಸಕಾಲಕ್ಕೆ ಇವು ದೊರೆಯದಿದ್ದರೆ ರೋಗಿಗಳ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಮುಂಬೈನ ಪ್ರತಿಷ್ಠಿತ ‘ಟಾಟಾ ಮೆಮೋರಿಯಲ್ ಸೆಂಟರ್’ ಸೇರಿದಂತೆ ದೇಶದ ಪ್ರಮುಖ ಆಂಕಾಲಜಿಸ್ಟ್ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಕೇಂದ್ರ ಔಷಧ ಇಲಾಖೆಯ (DoP) ಒಪ್ಪಿಗೆಯ ಮೇರೆಗೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಧನುರ್ವಾಯು (ಟೆಟಾನಸ್) ತಡೆಗಟ್ಟುವ ಎರಡು ಇಂಜೆಕ್ಷನ್ಗಳ ದರವನ್ನೂ ಹೆಚ್ಚಿಸಲು ಅನುಮತಿ ನೀಡಿದೆ.
ಉತ್ಪಾದನೆ ಸ್ಥಗಿತಕ್ಕೆ ಜಾಗತಿಕ ಬಿಕ್ಕಟ್ಟು ಕಾರಣ
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಾರ್ಮುಜ್ ಜಲಸಂಧಿಯ ರಾಜಕೀಯ ಬಿಕ್ಕಟ್ಟು ಹಾಗೂ ಯುಎಸ್-ಇರಾನ್ ನಡುವಿನ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಸಾಗಣೆ ವೆಚ್ಚ ವಿಪರೀತ ಹೆಚ್ಚಾಗಿದೆ. ಇದರಿಂದಾಗಿ ಕೀಮೋ ಔಷಧಿಗಳ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಔಷಧ ತಯಾರಕರ ಸಂಘವು (IDMA) ಕೊರತೆಯಿರುವ ಒಟ್ಟು 82 ಔಷಧಿಗಳ ಬೆಲೆ ಪರಿಷ್ಕರಣೆಗೆ ಮನವಿ ಮಾಡಿತ್ತು. ಸರ್ಕಾರದ ಕಠಿಣ ಬೆಲೆ ನಿಯಂತ್ರಣ ನಿಯಮಗಳಿಂದಾಗಿ ಗರಿಷ್ಠ ಚಿಲ್ಲರೆ ಬೆಲೆ (MRP) ಅತ್ಯಂತ ಕಡಿಮೆಯಿತ್ತು. ಕಂಪನಿಗಳಿಗೆ ನಷ್ಟ ಉಂಟಾಗುತ್ತಿದ್ದರಿಂದ ಅವು ಉತ್ಪಾದನೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದವು ಅಥವಾ ಸಂಪೂರ್ಣವಾಗಿ ನಿಲ್ಲಿಸಿದ್ದವು. ಸದ್ಯಕ್ಕೆ ತೀವ್ರ ಚರ್ಚೆಯ ನಂತರ ಅತ್ಯಗತ್ಯವಾಗಿ ಬೇಕಾದ ಕೇವಲ 4 ಔಷಧಿಗಳ ಬೆಲೆ ಹೆಚ್ಚಳಕ್ಕೆ ಮಾತ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಔಷಧಕ್ಕಾಗಿ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರುವ ರೋಗಿಗಳು
ಔಷಧಿಗಳ ಲಭ್ಯತೆ ಇಲ್ಲದ ಕಾರಣ ಆಸ್ಪತ್ರೆಗಳು ಇರುವ ಸ್ಟಾಕ್ಗಳನ್ನೇ ಮಿತವಾಗಿ ಬಳಸುತ್ತಿದ್ದು, ರೋಗಿಗಳಿಗೆ ನೀಡಬೇಕಾದ ಕೀಮೋಥೆರಪಿ ದಿನಾಂಕಗಳನ್ನು ಮುಂದೂಡುತ್ತಿವೆ. ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ತಜ್ಞರ ಪ್ರಕಾರ, ಹಿಂದೆ ಸುಲಭವಾಗಿ ಸಿಗುತ್ತಿದ್ದ ಕೀಮೋ ಡೋಸ್ಗಳಿಗಾಗಿ ಈಗ ರೋಗಿಗಳ ಕುಟುಂಬಸ್ಥರು ನಗರದಿಂದ ನಗರಕ್ಕೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಲೆಯುವಂತಾಗಿದೆ. ಕ್ಯಾನ್ಸರ್ ನಿಯಂತ್ರಣಕ್ಕೆ ನಿರಂತರ ಚಿಕಿತ್ಸೆ ಅಗತ್ಯವಾಗಿದ್ದು, ತಡವಾದರೆ ರೋಗ ಉಲ್ಬಣಿಸುವ ಅಪಾಯ ಹೆಚ್ಚಿರುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ ಪ್ಲಾಟಿನಂ ಲೋಹದ ಬೆಲೆ ಒಂದು ವರ್ಷದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಭಾರತದಲ್ಲಿ ಇವು ಅತ್ಯಗತ್ಯ ಔಷಧಿಗಳ ಪಟ್ಟಿಯಲ್ಲಿ (NLEM) ಇರುವುದರಿಂದ ಕಂಪನಿಗಳಿಗೆ ಸ್ವತಃ ಬೆಲೆ ಹೆಚ್ಚಿಸಲು ಸ್ವಾತಂತ್ರ್ಯ ಇರಲಿಲ್ಲ. ಈಗ ಸರ್ಕಾರದ ಹಸಿರು ನಿಶಾನೆಯಿಂದ ಮಾರುಕಟ್ಟೆಗೆ ಔಷಧಿಗಳು ಮರಳಿ ಬರುವ ನಿರೀಕ್ಷೆ ಇದೆಯಾದರೂ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚಿಕಿತ್ಸೆ ಮತ್ತಷ್ಟು ದುಬಾರಿಯಾಗಲಿದೆ ಎಂಬ ಭೀತಿ ಎದುರಾಗಿದೆ.
ಇದನ್ನೂ ಓದಿ: ಕೇರಳದ ನಾರಿಮಣಿಯರಿಗೆ ಸಿಹಿ ಸುದ್ದಿ: ಜೂನ್ 15 ರಿಂದ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ
