TOP NEWS

AI: ಎಐ (AI) ಅಬ್ಬರ ತಣ್ಣಗಾಗುತ್ತಿದ್ದಂತೆ ಭಾರತಕ್ಕೆ ಮತ್ತೆ ಸಿಕ್ಕಿತು ಜಾಗತಿಕ ಗದ್ದುಗೆ: ದಕ್ಷಿಣ ಕೊರಿಯಾ, ತೈವಾನ್ ಮಾರುಕಟ್ಟೆಗಳು ಉಡೀಸ್!

Taiwan and south Africa faced low in AI share market

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಕ್ರೇಜ್‌ನಿಂದಾಗಿ ಕಳೆದ ವಾರವಷ್ಟೇ ಭಾರತದ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭಾರಿ ಮುಖಭಂಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಐ ವಲಯದ ಷೇರುಗಳು ದಿಢೀರನೆ ನೆಲಕಚ್ಚಿದ ಪರಿಣಾಮ ಈ ಎರಡೂ ದೇಶಗಳ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡು ಯಥಾಸ್ಥಾನಕ್ಕೆ ಮರಳಿವೆ. ಇದರ ನೇರ ಲಾಭ ಪಡೆದಿರುವ ಭಾರತೀಯ ಷೇರು ಬಜಾರ್, ಜಾಗತಿಕವಾಗಿ ತನ್ನ ಬಲಿಷ್ಠ 6ನೇ ಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ಮರಳಿ ಪಡೆದಿದೆ.

ಒಂದೇ ವಾರದಲ್ಲಿ ಉಲ್ಟಾ ಹೊಡೆದ ಎಐ ಹವಾ

ಮೇ ತಿಂಗಳ ಅಂತ್ಯದಲ್ಲಿ ಹಾಗೂ ಜೂನ್ ಆರಂಭದಲ್ಲಿ ಜಾಗತಿಕ ಹೂಡಿಕೆ ಮಾರುಕಟ್ಟೆಯಲ್ಲಿ ಎಐ ತಂತ್ರಜ್ಞಾನದ ಅಬ್ಬರ ರಾಕೆಟ್ ವೇಗದಲ್ಲಿ ಮುನ್ನುಗ್ಗಿತ್ತು. ಎಐ ಚಿಪ್ ಹಾಗೂ ಸೆಮಿಕಂಡಕ್ಟರ್‌ಗಳನ್ನು ಸಿದ್ಧಪಡಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್, ಎಸ್‌ಕೆ ಹೈನಿಕ್ಸ್ ಹಾಗೂ ತೈವಾನ್‌ನ ಟಿಎಸ್‌ಎಂಸಿ (TSMC) ಕಂಪನಿಗಳ ಷೇರುಗಳ ಮೌಲ್ಯ ಹೂಡಿಕೆದಾರರನ್ನು ಹುಚ್ಚೆಬ್ಬಿಸಿತ್ತು. ಜಾಗತಿಕ ಇನ್ವೆಸ್ಟರ್ಸ್ ಮುಗಿಬಿದ್ದು ಹಣ ಹೂಡಿಕೆ ಮಾಡಿದ್ದರಿಂದ ದಕ್ಷಿಣ ಕೊರಿಯಾವು ಭಾರತವನ್ನು ಆರ್ಥಿಕವಾಗಿ ಓವರ್‌ಟೇಕ್ ಮಾಡಿ ವಿಶ್ವದ 6ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು. ಆದರೆ ತಂತ್ರಜ್ಞಾನ ವಲಯದ ಈ ಬೂಮ್ ಹೆಚ್ಚು ದಿನ ಬಾಳಲಿಲ್ಲ. ಕೇವಲ ಒಂದು ವಾರದ ಅವಧಿಯಲ್ಲಿ ಟೆಕ್ ಷೇರುಗಳು ದಿಢೀರ್ ಕುಸಿತ ಕಾಣುತ್ತಿದ್ದಂತೆ ಹೂಡಿಕೆದಾರರು ಬಂಡವಾಳವನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ ತೈವಾನ್ ಮತ್ತು ದಕ್ಷಿಣ ಕೊರಿಯಾ ಮಾರುಕಟ್ಟೆಗಳು ಕ್ರಮವಾಗಿ 7 ಮತ್ತು 8ನೇ ಸ್ಥಾನಕ್ಕೆ ಜಾರಿವೆ.

ಹೂಡಿಕೆದಾರರಿಗೆ ಮತ್ತೆ ನೆನಪಾದ ಸುರಕ್ಷಿತ ಭಾರತ!

ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಟೆಕ್ ಷೇರುಗಳು ತಲ್ಲಣಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಾಗತಿಕ ಹೂಡಿಕೆದಾರರು, ತಮಗೆ ಸದಾ ಕೈಹಿಡಿಯುವ ಸುರಕ್ಷಿತ ಮಾರುಕಟ್ಟೆಯಾದ ಭಾರತದತ್ತ ಧಾವಿಸಿದ್ದಾರೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯ (Market Capitalization) ಮತ್ತೆ ತೈವಾನ್ ಮತ್ತು ಕೊರಿಯಾಗಿಂತ ಎತ್ತರಕ್ಕೆ ಜಿಗಿದಿದೆ. ಈ ಆರ್ಥಿಕ ಏರಿಳಿತವು ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರತಕ್ಕಿರುವ ಸ್ಥಿರತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಭಾರತೀಯ ಮಾರುಕಟ್ಟೆಯ ತಾಕತ್ತು: ತೈವಾನ್ ಮತ್ತು ದಕ್ಷಿಣ ಕೊರಿಯಾಗಳ ಷೇರು ಮಾರುಕಟ್ಟೆಗಳು ಕೇವಲ ತಂತ್ರಜ್ಞಾನ, ಹಾರ್ಡ್‌ವೇರ್ ಹಾಗೂ ಸೆಮಿಕಂಡಕ್ಟರ್‌ ಕ್ಷೇತ್ರಗಳ ಮೇಲಷ್ಟೇ ಡಿಪೆಂಡ್ ಆಗಿವೆ. ಹಾಗಾಗಿ ಅಲ್ಲಿನ ಟೆಕ್ ವಲಯದಲ್ಲಿ ಸಣ್ಣ ನಡುಕ ಉಂಟಾದರೂ ಇಡೀ ಮಾರುಕಟ್ಟೆ ಧರಾಶಾಹಿಯಾಗುತ್ತದೆ. ಆದರೆ ಭಾರತದ ಮಾರುಕಟ್ಟೆ ಹಾಗಿಲ್ಲ. ಇಲ್ಲಿ ಐಟಿ ಜೊತೆಗೆ ಬ್ಯಾಂಕಿಂಗ್, ಇಂಧನ, ಆಟೋಮೊಬೈಲ್ ಮತ್ತು ಎಫ್‌ಎಂಸಿಜಿ (FMCG) ನಂತಹ ಹತ್ತು ಹಲವು ಬಲಿಷ್ಠ ಕ್ಷೇತ್ರಗಳ ವೈವಿಧ್ಯಮಯ ಬ್ಯಾಕಪ್ ಇದೆ. ಇದೇ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಎಂತಹದೇ ಆಘಾತಗಳು ಎದುರಾದರೂ ಭಾರತೀಯ ಮಾರುಕಟ್ಟೆ ಸುಲಭವಾಗಿ ಜಗ್ಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ: ಕೊಟ್ಟಿಯೂರು ಶಿವನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ: ಕನ್ನಡಿಗರಿಗೆ ರಕ್ಷಣೆ ಹಾಗೂ ಗೂಂಡಾಗಿರಿ ವಿರುದ್ಧ ಕ್ರಮದ ಭರವಸೆ ನೀಡಿದ ಡಿಐಜಿ ಯತೀಶ್ಚಂದ್ರ

Leave a Reply

Your email address will not be published. Required fields are marked *