TOP NEWS

Weather: ರಾಜ್ಯಾದ್ಯಂತ ಆವರಿಸಿದ ಮುಂಗಾರು: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯ ‘ರೆಡ್ ಅಲರ್ಟ್’!

Weather update heavy rain and storm expected from June 8 to 11

ಬೆಂಗಳೂರು: ನೈಋತ್ಯ ಮುಂಗಾರು ಮಾರುತಗಳು ಈಗ ಇಡೀ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಈ ಕುರಿತು (Weather) ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರದಂದು ಅಧಿಕೃತ ಪ್ರಕಟಣೆ ಹೊರಡಿಸಲಿದೆ. ರಾಜ್ಯದ ಈಶಾನ್ಯ ತುದಿಯಲ್ಲಿರುವ ಬೀದರ್ ಜಿಲ್ಲೆಗೆ ಭಾನುವಾರ ಮುಂಗಾರು ಮಳೆ ತಲುಪುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವರುಣನ ಸಿಂಚನವಾದಂತಾಗಿದೆ. ಬೀದರ್‌ಗೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಗೆ ಶನಿವಾರವೇ ಮುಂಗಾರು ಪ್ರವೇಶಿಸಿತ್ತು ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ. ಮುಂಗಾರು ಇಡೀ ರಾಜ್ಯಕ್ಕೆ ವ್ಯಾಪಿಸಿರುವ ಬೆನ್ನಲ್ಲೇ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಹಲವು ಜಿಲ್ಲೆಗಳಿಗೆ ಹಂತ-ಹಂತವಾಗಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ರೆಡ್‌ ಅಲರ್ಟ್‌

ಸೋಮವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಕಡೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ. ಇನ್ನು ಮಂಗಳವಾರದಂದು ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇರಲಿದೆ. ಬುಧವಾರದ ವೇಳೆಗೆ ವರುಣನ ಅಬ್ಬರ ಉತ್ತರ ಕರ್ನಾಟಕಕ್ಕೂ ವಿಸ್ತರಿಸಲಿದ್ದು ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜೊತೆಗೆ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 11 ರಿಂದ 13 ರವರೆಗೆ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ಮುಂದುವರಿಯಲಿದ್ದು, ಇದೇ ಸಮಯದಲ್ಲಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಭಾಗಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಎನ್. ಪುವಿಯರಸನ್ ಅವರು ನೀಡಿರುವ ಮಾಹಿತಿ ಪ್ರಕಾರ, ಮುಂಗಾರು ಆರಂಭವಾದ ತಕ್ಷಣ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3.1 ಕಿಲೋಮೀಟರ್ ಎತ್ತರದಲ್ಲಿ ಮೇಲ್ಮೈ ಗಾಳಿಯ ಸುಳಿಗಾಳಿ ಉಂಟಾಗಿದ್ದು, ಇದು ಮುಂದಿನ ಎರಡರಿಂದ ಮೂರು ದಿನಗಳ ಕಾಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಹೀಗೆಯೇ ಮುಂದುವರಿಯಲಿದೆ.

ಈ ಸುಳಿಗಾಳಿಯು ಕ್ರಮೇಣ ಉತ್ತರದ ಕಡೆಗೆ ಚಲಿಸುವುದರಿಂದ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗಾಳಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ. ಇದರ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಭಾಗಗಳಲ್ಲಿ ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.

ಭೂಕುಸಿತ ಸಾಧ್ಯತೆ

ನಿರಂತರವಾಗಿ ಸುರಿಯಲಿರುವ ಈ ಭಾರಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದ್ದು, ಇದು ವಾಹನ ಸಂಚಾರಕ್ಕೆ ಅಡ್ಡಿಪಡಿಸಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆದರೆ ಸದ್ಯಕ್ಕೆ ಆಡಳಿತ ಮಂಡಳಿಯಾಗಲಿ ಅಥವಾ ಸರ್ಕಾರವಾಗಲಿ ಶಾಲೆ-ಕಾಲೇಜುಗಳಿಗೆ ಯಾವುದೇ ರಜೆ ಘೋಷಿಸಿಲ್ಲ. ಸದ್ಯಕ್ಕೆ ಮುಂಗಾರು ಚುರುಕಾಗಿದ್ದರೂ ಸಹ, ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂಬ ತನ್ನ ಹಳೆಯ ಮುನ್ಸೂಚನೆಗೆ ಇಲಾಖೆ ಈಗಲೂ ಬದ್ಧವಾಗಿದೆ. ಅಲ್ಲದೆ, ಪ್ರಸ್ತುತ ಸಕ್ರಿಯವಾಗಿರುವ ಈ ಮಳೆಯ ಅಬ್ಬರವು ಮುಂದಿನ 20 ದಿನಗಳ ಒಳಗೆ ಕೊಂಚ ಕ್ಷೀಣಿಸುವ ಸಾಧ್ಯತೆಯಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಳೇ ದ್ವೇಷ ಮರೆತು ಮುನ್ನಡೆಯಿರಿ, 2028 ಕ್ಕೆ ಮತ್ತೆ ಕಾಂಗ್ರೆಸ್ ಗೆಲ್ಲಿಸುವುದೇ ನಿಮ್ಮ ಟಾರ್ಗೆಟ್: ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

Leave a Reply

Your email address will not be published. Required fields are marked *