TOP NEWS

Mysuru: ‘ಅತ್ಯಮೂಲ್ಯ ಸಮಯ ರಕ್ಷಕರುʼ ಕುರಿತು ತರಬೇತಿ, ಅಪೋಲೋದಿಂದ ವಿಶೇಷ ಕಾರ್ಯ

Golden hour guardian training by apollo in Mysuru

ಮೈಸೂರು: ಮೈಸೂರಿನ (Mysuru) ಅಪೋಲೊ ಬಿಜಿಎಸ್ ಆಸ್ಪತ್ರೆ, ಯಂಗ್ ಇಂಡಿಯನ್ಸ್ (Yi), ಮೈಸೂರು ನಗರ ಟ್ರಾಫಿಕ್ ಪೊಲೀಸ್, ಆಟೋ ಚಾಲಕರ ಸಂಘ ಮತ್ತು ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು “ಅತ್ಯಮೂಲ್ಯ ಸಮಯ ರಕ್ಷಕರು (ಗೋಲ್ಡನ್ ಅವರ್ ಗಾರ್ಡಿಯನ್ಸ್) ತರಬೇತಿ 2026” ಕಾರ್ಯಕ್ರಮ ನಡೆಯಿತು. ತುರ್ತು ಸಂದರ್ಭಗಳಲ್ಲಿ ಸೂಕ್ತ ಸ್ಪಂದನೆ ಸಿಗುವಂಥ ವಾತಾರವಣವನ್ನು ಮೈಸೂರಿನಲ್ಲಿ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಪೊಲೀಸ್ ಸಿಬ್ಬಂದಿ, ಆಟೋ ಚಾಲಕರು ಮತ್ತು ಕೆಎಸ್‌ಆರ್‌ಟಿಸಿ ಚಾಲಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಪಘಾತ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳ ವೇಳೆ ಜೀವ ಉಳಿಸಲು ನೆರವಾಗುವ ತುರ್ತು ಸ್ಪಂದನಾ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ಯಾರೆಲ್ಲಾ ಭಾಗಿ ಆಗಿದ್ದರು?
ಯಂಗ್ ಇಂಡಿಯನ್ಸ್ (Yi) ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕಾ, ಸಂಸ್ಥೆಯ ರಸ್ತೆ ಸುರಕ್ಷತಾ ವಿಭಾಗದ ಅಧ್ಯಕ್ಷ ಮನೀಶ್, ಸಂಸ್ಥೆಯ ಆರೋಗ್ಯ ವಿಭಾಗದ ಸಹ ಅಧ್ಯಕ್ಷರಾದ ಸುಕೃತಾ ಎನ್, ಮೈಸೂರು ಟ್ರಾಫಿಕ್ ಪೊಲೀಸ್ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಜತೆಗೆ ಅಪೋಲೊ ಬಿಜಿಎಸ್ ಆಸ್ಪತ್ರೆಯ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಪೋಲೊ ಆಸ್ಪತ್ರೆಯ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎನ್. ಜಿ. ಭರತೀಶ ರೆಡ್ಡಿ, ತುರ್ತು ಸಂದರ್ಭಗಳಲ್ಲಿ ಸಮುದಾಯದ ನೆರವಿನ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅತ್ಯಮೂಲ್ಯ ಸಮಯದಲ್ಲಿ (ಗೋಲ್ಡನ್‌ ಅವರ್‌) ತಕ್ಷಣ ನಾವು ಕೈಗೊಳ್ಳುವ ಕ್ರಮಗಳು ಜೀವಗಳನ್ನು ಉಳಿಸಬಹುದು ಹಾಗೂ ರೋಗಿಗಳ ಅನಾರೋಗ್ಯವನ್ನು ಬೇಗನೇ ಗುಣಪಡಿಸಬಹುದು ಎಂದು ಹೇಳಿದರು.

ಮೈಸೂರು ಬಿಜಿಎಸ್‌ ಅಪೋಲೊ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಇಂಚಾರ್ಜ್ ಮತ್ತು ಕನ್ಸಲ್ಟಂಟ್‌ ಡಾ.ಶಿವಕುಮಾರ್ ಬಸವರದ್ಧರ್ ಮಾತನಾಡಿ, ರಸ್ತೆಯಲ್ಲಿ ಉಂಟಾಗುವ ತುರ್ತು ವೈದ್ಯಕೀಯ ಸಂದರ್ಭದ ವೇಳೆ ಮೊದಲು ನೆರವಾಗುವವರೇ ಹೆಚ್ಚಿನ ಸಂದರ್ಭಗಳಲ್ಲಿ ಜೀವ ಉಳಿಸಿರುತ್ತಾರೆ ಎಂದು ಒತ್ತಿಹೇಳಿದರು ಮತ್ತು ಸಿಪಿಆರ್, ಪ್ರಥಮ ಚಿಕಿತ್ಸೆ ಮತ್ತು ಅಘಾತದ ವೇಳೆ ಕೈಗೊಳ್ಳಬೇಕಾದ ಜ್ಞಾನ ಹೊಂದಿದ್ದರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವವರೆಗೂ ತುರ್ತು ಸಂದರ್ಭವನ್ನು ಆತ್ಮವಿಶ್ವಾಸದಿಂದ ನಿಭಾಯಿಸಬಹುದು ಎಂದು ಹೇಳಿದರು.
ಯಂಗ್ ಇಂಡಿಯನ್ಸ್ (Yi) ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕಾ ಮಾತನಾಡಿ, ಜೀವ ರಕ್ಷಕ ಕೌಶಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಾಗೂ ಜನಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿಸುವುದರಿಂದ ಸುರಕ್ಷಿತ ನಗರ ಸೃಷ್ಟಿಸಲು ಸಾಧ್ಯವಾಗುತ್ತದೆ. ಜತೆಗೆ ಇದರಿಂದ ತುರ್ತು ಸಂದರ್ಭದ ವೇಳೆ ಜನರಿಂದ ಉತ್ತಮ ಸ್ಪಂದನೆ ಸಹ ಸಿಗುತ್ತದೆ ಎಂದರು. ಅಲ್ಲದೇ, ಅಪೋಲೊ ಆಸ್ಪತ್ರೆಯ ಸಹಯೋಗದ ಪ್ರಯತ್ನವನ್ನು ಶ್ಲಾಘಿಸಿದ ಅವರು, ಸಮುದಾಯ ನೇತೃತ್ವದ ಸುರಕ್ಷತಾ ಉಪಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಕೈಜೋಡಿಸಿದ ಯಂಗ್ ಇಂಡಿಯನ್ಸ್‌ (Yi) ಕಾರ್ಯಕ್ಕೂ ಅಪೋಲೊ ಬಿಜಿಎಸ್ ಆಸ್ಪತ್ರೆಯು ಮೆಚ್ಚುಗೆ ವ್ಯಕ್ತಪಡಿಸಿತು. ಮೈಸೂರಿನಲ್ಲಿ ತುರ್ತು ಸಿದ್ಧತೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲು ನೀಡಿದ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು.

ಕಾರ್ಯಕ್ರಮದಲ್ಲಿ ಸಿಪಿಆರ್, ಪ್ರಥಮ ಚಿಕಿತ್ಸೆ, ಅಪಘಾತದ ವೇಳೆ ನೆರವಾಗುವ ಬಗೆ, ಆಂಬುಲೆನ್ಸ್ ವ್ಯವಸ್ಥೆ ಮಾಡುವುದು ಮತ್ತು ಅತ್ಯಮೂಲ್ಯ ಸಮಯ ( ಗೋಲ್ಡನ್ ಅವರ್) ಕುರಿತು ಜಾಗೃತಿ ಮೂಡಿಸಲಾಯಿತು. ನಂತರ ಪ್ರಮಾಣಪತ್ರ ವಿತರಣೆ ಮಾಡಿ ಭಾಗವಹಿಸಿದವರನ್ನು ಮತ್ತು ಪಾಲುದಾರ ಸಂಸ್ಥೆಗಳನ್ನು ಗೌರವಿಸಲಾಯಿತು.

ಇದನ್ನೂ ಓದಿ: ರಾಮನಗರಕ್ಕೆ ಒಲಿದ ಸಿಎಂ ಗದ್ದುಗೆ: ರಾಮಕೃಷ್ಣ ಹೆಗಡೆ, ದೇವೇಗೌಡರ ಸಾಲಿಗೆ 5ನೇ ನಾಯಕನಾಗಿ ಡಿ.ಕೆ. ಶಿವಕುಮಾರ್ ಸೇರ್ಪಡೆ!

Leave a Reply

Your email address will not be published. Required fields are marked *