TOP NEWS

DK Shivakumar: ರಾಮನಗರಕ್ಕೆ ಒಲಿದ ಸಿಎಂ ಗದ್ದುಗೆ: ರಾಮಕೃಷ್ಣ ಹೆಗಡೆ, ದೇವೇಗೌಡರ ಸಾಲಿಗೆ 5ನೇ ನಾಯಕನಾಗಿ ಡಿ.ಕೆ. ಶಿವಕುಮಾರ್ ಸೇರ್ಪಡೆ!

karnataka politics dk shivakumar to become 5th cm from ramanagar

ರಾಮನಗರ: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ಜಿಲ್ಲೆಗಳಲ್ಲಿ ಒಂದಾದ ರಾಮನಗರಕ್ಕೆ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಯ ಸೌಭಾಗ್ಯ ಸಿಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದಂತೆ ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಈಗ ಬಹುತೇಕ ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದು ಡಿ.ಕೆ. ಶಿವಕುಮಾರ್ ಅವರು ಸಿಎಂ ಪೀಠ ಅಲಂಕರಿಸಿದರೆ, ರಾಮನಗರ ಜಿಲ್ಲೆಯ ಇತಿಹಾಸದಲ್ಲಿ ಈ ಅತ್ಯುನ್ನತ ಹುದ್ದೆಗೇರಿದ ಐದನೇ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಇದರ ಜೊತೆಗೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ನಂತರ ಕಾಂಗ್ರೆಸ್ ಪಕ್ಷದಿಂದ ಈ ಹುದ್ದೆ ಅಲಂಕರಿಸುತ್ತಿರುವ ಜಿಲ್ಲೆಯ ಎರಡನೇ ನಾಯಕ ಎಂಬ ಹೊಸ ದಾಖಲೆಯನ್ನೂ ಅವರು ಬರೆಯಲಿದ್ದಾರೆ.

ಮೊದಲ ಮುಖ್ಯಮಂತ್ರಿ ಸಹ ಇದೇ ಜಿಲ್ಲೆಯವರು

ರಾಮನಗರ ಜಿಲ್ಲೆಯು ರಾಜ್ಯಕ್ಕೆ ಮೊದಲಿನಿಂದಲೂ ಪ್ರಭಾವಿ ನಾಯಕರನ್ನು ನೀಡುತ್ತಾ ಬಂದಿದೆ. ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಹಾಗೂ ಹೆಮ್ಮೆಯ ವಿಧಾನಸೌಧದ ಆಧುನಿಕ ಶಿಲ್ಪಿ ಕೆಂಗಲ್ ಹನುಮಂತಯ್ಯನವರು ಮೂಲತಃ ರಾಮನಗರ ತಾಲೂಕಿನವರಾಗಿದ್ದರು. ಅವರು ೧೯೫೨ ರ ಮೊದಲ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಕಾಲ ಅತ್ಯುತ್ತಮ ಆಡಳಿತ ನೀಡಿದ್ದರು. ತದನಂತರ ೧೯೮೩ ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾದಾಗ ರಾಮಕೃಷ್ಣ ಹೆಗಡೆ ಅವರಿಗೆ ಸಿಎಂ ಆಗುವ ಅವಕಾಶ ಒದಗಿಬಂದಿತ್ತು. ಆ ಸಮಯದಲ್ಲಿ ಅವರು ಯಾವುದೇ ಸದನದ ಸದಸ್ಯರಾಗಿರಲಿಲ್ಲ. ಆಗ ಅವರಿಗಾಗಿ ಕನಕಪುರದ ಹಿರಿಯ ನಾಯಕ ಪಿ.ಜಿ.ಆರ್. ಸಿಂಧ್ಯ ಅವರು ತಮ್ಮ ಶಾಸಕ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಆ ಬಳಿಕ ನಡೆದ ಉಪಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸಿ ಗೆದ್ದ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.

ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೊಡುಗೆಯೂ ದೊಡ್ಡದಿದೆ. ೧೯೯೪ ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದ ದೇವೇಗೌಡರು, ಜನತಾ ದಳಕ್ಕೆ ಪ್ರಚಂಡ ಬಹುಮತ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಸುಮಾರು ೧೭ ತಿಂಗಳುಗಳ ಕಾಲ ರಾಜ್ಯವನ್ನು ಮುನ್ನಡೆಸಿದ ಅವರು, ನಂತರ ದೇಶದ ಪ್ರಧಾನಮಂತ್ರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅವರ ನಂತರ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ೨೦೦೪ ರಲ್ಲಿ ಮೊದಲ ಬಾರಿಗೆ ರಾಮನಗರದಿಂದ ಗೆದ್ದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ೨೦ ತಿಂಗಳು ಸಿಎಂ ಆಗಿದ್ದ ಅವರು, ನಂತರ ೨೦೧೮ ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ೧೪ ತಿಂಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.

ಈಗ ಇದೇ ಹಿರಿಯ ನಾಯಕರ ಸಾಲಿಗೆ ಕನಕಪುರದ ಮಣ್ಣಿನ ಮಗ ಡಿ.ಕೆ. ಶಿವಕುಮಾರ್ ಅವರು ಐದನೇ ನಾಯಕನಾಗಿ ಸೇರ್ಪಡೆಯಾಗುತ್ತಿದ್ದಾರೆ. ತಮ್ಮ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸುತ್ತಾ, ಕಲ್ಲುಬಂಡೆಯಂತೆ ನಿಂತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದಿರುವ ಡಿಕೆಶಿ ಅವರಿಗೆ ಕಡೆಗೂ ಸಿಎಂ ಪಟ್ಟ ಒಲಿಯುತ್ತಿರುವುದು ಇಡೀ ಜಿಲ್ಲೆಯ ಜನರಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ಸಂತಸ ಹಾಗೂ ಹೊಸ ರಾಜಕೀಯ ಸಂಚಲನವನ್ನು ಮೂಡಿಸಿದೆ.

ಇದನ್ನೂ ಓದಿ:ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾವುಕರಾದ ಸಿದ್ದರಾಮಯ್ಯ

Leave a Reply

Your email address will not be published. Required fields are marked *