TOP NEWS

Siddaramaiah: ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾವುಕರಾದ ಸಿದ್ದರಾಮಯ್ಯ

siddaramaiah becomes emotional after resignation

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬಳಿಕ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಸುದೀರ್ಘ ಹಾಗೂ ರೋಚಕ ರಾಜಕೀಯ ಪಯಣವನ್ನು ಅತ್ಯಂತ ಭಾವುಕರಾಗಿ ಮೆಲುಕು ಹಾಕಿದ್ದಾರೆ. ತಮಗೆ ರಾಜಕೀಯ ಆಶ್ರಯ ನೀಡಿ ಬೆಳೆಸಿದ ಕಾಂಗ್ರೆಸ್ ಪಕ್ಷ, ಹೈಕಮಾಂಡ್ ನಾಯಕರು ಮತ್ತು ತಮ್ಮ ಆಡಳಿತಾವಧಿಯಲ್ಲಿ ಸಾಥ್ ನೀಡಿದ ಸಹೋದ್ಯೋಗಿಗಳಿಗೆ ಸದಾ ಚಿರಋಣಿಯಾಗಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ತಾವು ಕಾಂಗ್ರೆಸ್ ಸೇರಿದ ದಿನಗಳನ್ನು ನೆನಪಿಸಿಕೊಂಡ ಅವರು, ನಾನು 2006 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೆ. ಅಂದಿನಿಂದ ಇಂದಿನವರೆಗೂ ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರು, ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ನನ್ನ ಮೇಲೆ ಅಪಾರವಾದ ಪ್ರೀತಿ ಮತ್ತು ವಿಶ್ವಾಸವನ್ನು ತೋರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಅತ್ಯುನ್ನತ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದ್ದು, ನನ್ನ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು ನೀಡಿದ ಸಹಕಾರವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ತಮ್ಮ ಹಳ್ಳಿಯ ದಿನಗಳನ್ನು ನೆನಪಿಸಿಕೊಂಡ ಸಿದ್ದರಾಮಯ್ಯ

ಒಂದು ಸಣ್ಣ ಹಳ್ಳಿಯಿಂದ ಬಂದ ಸಾಮಾನ್ಯ ರೈತನ ಮಗನಾದ ನಾನು, ಎಂದಾದರೂ ಒಂದು ದಿನ ಶಾಸಕನಾಗುತ್ತೇನೆ ಅಥವಾ ಮಂತ್ರಿಯಾಗುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಕುಟುಂಬದ ಹಿನ್ನೆಲೆಯೂ ರಾಜಕಾರಣದ್ದಲ್ಲ, ನನ್ನ ಕುಟುಂಬಸ್ಥರು ಯಾರೂ ರಾಜಕೀಯದಲ್ಲಿ ಇರಲಿಲ್ಲ. ನಾನು ರಾಜಕಾರಣಕ್ಕೆ ಬಂದಿದ್ದೇ ಒಂದು ಆಕಸ್ಮಿಕ ಎಂದು ಹಳೆಯ ದಿನಗಳಿಗೆ ಜಾರಿದ್ದಾರೆ. ನಾನು ಮೊದಲಿನಿಂದಲೂ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿಯವರ ತತ್ವ ಆದರ್ಶಗಳಲ್ಲಿ ದೃಢವಾದ ನಂಬಿಕೆ ಇಟ್ಟಿದ್ದವನು. ನಮ್ಮ ಸಂವಿಧಾನದ ಮೇಲೆ ನನಗೆ ಅಪಾರವಾದ ಗೌರವವಿದೆ. ಸಮಾಜದಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಬಾಳಬೇಕೆಂದು ಬಯಸಿದವನು ನಾನು. ದೇಶದ ಸಂಪತ್ತು ಕೇವಲ ಕೆಲವರ ಪಾಲಾಗದೆ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು, ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಹಾಗೂ ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಿದ್ಧಾಂತದ ಮೇಲೆ ನಾನು ಇಷ್ಟು ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ತಮ್ಮ ಆಡಳಿತದ ಮೂಲ ಮಂತ್ರವನ್ನು ಬಿಚ್ಚಿಟ್ಟಿದ್ದಾರೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿರುವ ಕುರಿತು ಹೆಮ್ಮೆಯಿಂದ ಮಾತನಾಡಿದ ಅವರು, ನಾವು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಮತ್ತು ಎಂದೂ ಜವಾಬ್ದಾರಿಯಿಂದ ತಪ್ಪಿಸಿಕೊಂಡು ಹೋಗುವ ಕೆಲಸವನ್ನು ನಾನು ಮಾಡಿಲ್ಲ. ೨೦೧೩ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ನೀಡಿದ್ದ ೧೬೫ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದೆವು. ಇನ್ನು ೨೦೨೩ರ ಚುನಾವಣೆಯಲ್ಲಿ ೫೫೦ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದು, ಈ ಪೈಕಿ ಈಗಾಗಲೇ ಸುಮಾರು ೩೦೦ ಭರವಸೆಗಳನ್ನು ಅತ್ಯಲ್ಪ ಅವಧಿಯಲ್ಲೇ ಈಡೇರಿಸಿದ್ದೇವೆ. ಇದರ ಜೊತೆಗೆ ನಾವು ಘೋಷಿಸಿದ್ದ ೫ ಮುಖ್ಯ ಗ್ಯಾರಂಟಿಗಳನ್ನು ಮೊದಲ ವರ್ಷವೇ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈ ನುಡಿದಂತೆ ನಡೆದ ಸಾಧನೆ ನನಗೆ ಮತ್ತು ನಮ್ಮ ಇಡೀ ಪಕ್ಷಕ್ಕೆ ಭಾರಿ ಸಂತೃಪ್ತಿ ತಂದಿದೆ ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗಳಿಗೆ ಕಠಿಣವಾಗಿ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ಭಾರಿ ಟೀಕೆಗಳನ್ನು ಮಾಡಿದ್ದರು ಮತ್ತು ಇದರಿಂದ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ, ಈ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾದ ಬಳಿಕ ರಾಜ್ಯದ ಜನರ ತಲಾ ಆದಾಯ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ ಇಡೀ ಭಾರತ ದೇಶದಲ್ಲೇ ತಲಾ ಆದಾಯದ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ, ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ (GST) ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕ ಇಂದು ೨ನೇ ಸ್ಥಾನದಲ್ಲಿ ನಿಂತಿದೆ ಎಂದು ಅಂಕಿ-ಸಂಖ್ಯೆಗಳ ಸಮೇತ ತಮ್ಮ ಆಡಳಿತ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕು ರಾಜ್ಯಗಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

Leave a Reply

Your email address will not be published. Required fields are marked *