TOP NEWS

Twisha Sharma: ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣ: ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಮುಂಗಡ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

twisha sharma mother in law anticipatory bail cancelled

ಭೋಪಾಲ್: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ತ್ವಿಶಾ ಶರ್ಮಾ (Twisha Sharma) ವರದಕ್ಷಿಣೆ ಕಿರುಕುಳ ಮತ್ತು ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಭೋಪಾಲ್ ಜಿಲ್ಲೆಯ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಸ್ಥಳೀಯ ನ್ಯಾಯಾಲಯ ಮಂಜೂರು ಮಾಡಿದ್ದ ಮುಂಗಡ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮೇ 15 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಎಫ್‌ಐಆರ್ ದಾಖಲಾದ ಕೆಲವೇ ಗಂಟೆಗಳಲ್ಲಿ ಗಿರಿಬಾಲಾ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೃತ ತ್ವಿಶಾ ಶರ್ಮಾ ತಂದೆ ನವನಿಧಿ ಶರ್ಮಾ ಹಾಗೂ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ಅವರು ಜಾಮೀನನ್ನು ಸಂಪೂರ್ಣವಾಗಿ ವಜಾಗೊಳಿಸಿ ಆದೇಶಿಸಿದ್ದಾರೆ.

ತನಿಖೆಗೆ ಸಹಕರಿಸದ ತ್ವಿಶಾ ಶರ್ಮಾ ಅತ್ತೆ

ವಿಚಾರಣೆಯ ವೇಳೆ ಮಧ್ಯಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೆಳ ನ್ಯಾಯಾಲಯವು ಗಂಭೀರವಾದ ಸಾಕ್ಷ್ಯಗಳನ್ನು ಪರಿಗಣಿಸದೆ ತರಾತುರಿಯಲ್ಲಿ ಮುಂಗಡ ಜಾಮೀನು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ವಾದಿಸಿದರು. ಜಾಮೀನು ಪಡೆದ ನಂತರವೂ ಆರೋಪಿಯು ಪತ್ರಿಕಾಗೋಷ್ಠಿಗಳನ್ನು ನಡೆಸಿ ಮೃತರ ವಿರುದ್ಧವೇ ಆರೋಪ ಮಾಡುತ್ತಾ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಕೇವಲ 33 ವರ್ಷದ ಯುವತಿ ಪ್ರಾಣ ಕಳೆದುಕೊಂಡಿರುವ ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಮತ್ತು ತನಿಖಾ ಸಂಸ್ಥೆಗೆ ಸಹಕರಿಸುತ್ತಿಲ್ಲ. ಕೆಳ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷಿಗಳ ಒಂದೇ ಒಂದು ಸಾಲನ್ನೂ ಪರಿಗಣಿಸದೆ ಕೇವಲ ರಕ್ಷಣಾತ್ಮಕ ದಾಖಲೆಗಳನ್ನು ನಂಬಿ ಜಾಮೀನು ನೀಡಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು. ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿದ ಹೈಕೋರ್ಟ್, ತ್ವಿಶಾ ಶರ್ಮಾ ಅವರ ದೇಹದ ಮೇಲೆ ನೇಣು ಬಿಗಿದ ಗುರುತುಗಳಲ್ಲದೆ ಇನ್ನು ಆರು ಗಾಯಗಳಾಗಿದ್ದು, ಅದರಲ್ಲಿ ತಲೆಯ ಮೇಲಿದ್ದ ಗಾಯವು ಸಾವಿಗೂ ಮುನ್ನವೇ ಸಂಭವಿಸಿದೆ ಮತ್ತು ಈ ಗಾಯಗಳು ದೇಹವನ್ನು ಕೆಳಗಿಳಿಸುವಾಗ ಅಥವಾ ಆಸ್ಪತ್ರೆಗೆ ಸಾಗಿಸುವಾಗ ಆಗಿದ್ದಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ ವಿಶೇಷ ತನಿಖಾ ತಂಡದಿಂದ (SIT) ಪ್ರಕರಣವನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (CBI) ಈಗ ಸಕ್ರಿಯವಾಗಿ ಕಾರ್ಯಾಚರಣೆಗೆ ಇಳಿದಿದ್ದು, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ. ಸಿಬಿಐ ಪರ ವಕೀಲ ಸುಯಶ್ ಮೋಹನ್ ಗುರು ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸಾವಿನ ಸುತ್ತಲಿನ ನಿಗೂಢತೆ ಮತ್ತು ಪ್ರಭಾವಿ ಆರೋಪಿಗಳ ಭಾಗಿಯಾಗಿರುವಿಕೆಯನ್ನು ಪತ್ತೆಹಚ್ಚಲು ಆರೋಪಿಯ ಕಸ್ಟಡಿಯಲ್ ವಿಚಾರಣೆ (ವಶಕ್ಕೆ ಪಡೆದು ವಿಚಾರಣೆ ನಡೆಸುವುದು) ಅತ್ಯಗತ್ಯವಾಗಿದೆ ಎಂದು ಹೇಳಿದರು. ಮೇ ೧೩ ರಂದು ಭೋಪಾಲ್ ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಮೊದಲ ಮರಣೋತ್ತರ ಪರೀಕ್ಷೆಯ ವೇಳೆ ಆರೋಪಿ ಗಿರಿಬಾಲಾ ಅವರ ಸಹೋದರಿ ಮತ್ತು ಖಾಸಗಿ ವೈದ್ಯರೊಬ್ಬರು ಕಾನೂನುಬಾಹಿರವಾಗಿ ಮರಣೋತ್ತರ ಪರೀಕ್ಷಾ ಕೊಠಡಿಯೊಳಗೆ ಹಾಜರಿದ್ದರು ಎಂದು ಸಿಬಿಐ ಗಂಭೀರ ಆರೋಪ ಮಾಡಿದೆ. ಅಲ್ಲದೆ ದೇಹದ ಮೇಲಿದ್ದ ಗಾಯಗಳ ಬಗ್ಗೆ ಆರೋಪಿಗಳು ಯಾವುದೇ ಸೂಕ್ತ ವಿವರಣೆ ನೀಡಿಲ್ಲ ಎಂದು ಸಿಬಿಐ ತಿಳಿಸಿದೆ.

ಇದೇ ಪ್ರಕರಣದಲ್ಲಿ ತ್ವಿಶಾ ಶರ್ಮಾ ಅವರ ಪತಿ ಮತ್ತು ಗಿರಿಬಾಲಾ ಅವರ ಪುತ್ರ ಸಮರ್ಥ್ ಸಿಂಗ್‌ನನ್ನು ಈಗಾಗಲೇ ಭೋಪಾಲ್ ಪೊಲೀಸರು ಬಂಧಿಸಿದ್ದರು. ಇದೀಗ ಸ್ಥಳೀಯ ನ್ಯಾಯಾಲಯವು ಸಮರ್ಥ್ ಸಿಂಗ್‌ನ ಕಸ್ಟಡಿಯನ್ನು ಸಿಬಿಐಗೆ ಒಪ್ಪಿಸಿದೆ. ಸಿಬಿಐ ಅಧಿಕಾರಿಗಳ ತಂಡವು ಈಗಾಗಲೇ ಸಮರ್ಥ್ ಸಿಂಗ್‌ನನ್ನು ಆತನ ನಿವಾಸಕ್ಕೆ ಕರೆದೊಯ್ದು, ಮೇ 12 ರ ರಾತ್ರಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾದ ಸ್ಥಳದ ಮಹಜರು ಮತ್ತು ತೀವ್ರ ತಪಾಸಣೆ ನಡೆಸಿದೆ. ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಈ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬಂದಿದ್ದ ಆಂಧ್ರ ಮೂಲದ ಯುವಕ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು!

Leave a Reply

Your email address will not be published. Required fields are marked *