TOP NEWS

DK Shivakumar: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹೈಡ್ರಾಮಾ: ಅಂದು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

astrologer prediction about dk shivakumar cm post

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸಿಎಂ ಕುರ್ಚಿ ಏರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಭಾರಿ ಸಂಚಲನದ ನಡುವೆಯೇ, ಹಿಂದೆ ಪ್ರಮುಖ ಜ್ಯೋತಿಷಿಗಳು ರಾಜ್ಯದ ರಾಜಕೀಯ ಭವಿಷ್ಯದ ಕುರಿತು ನುಡಿದಿದ್ದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರದ ಮುನ್ಸೂಚನೆ ಸಿಗುತ್ತಿದ್ದಂತೆ, ಅಂದು ಜ್ಯೋತಿಷಿಗಳು ಹೇಳಿದ್ದ ಒಂದೊಂದೇ ಪ್ರಮುಖ ಭವಿಷ್ಯಗಳು ಈಗ ನಿಜವಾಗುತ್ತಿವೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.

ಜ್ಯೋತಿಷಿ ಪ್ರಶಾಂತ್‌ ಕಿಣಿ ಭವಿಷ್ಯ

ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಈ ಹಿಂದೆ ನುಡಿದಿದ್ದ ರಾಜಕೀಯ ಭವಿಷ್ಯವೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಈ ಹಿಂದೆಯೇ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದರು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅವರ ಈ ಮಾತು ಅಕ್ಷರಶಃ ನಿಜವಾದಂತಾಗಿದೆ. ವಿಶೇಷವೆಂದರೆ, ಖುದ್ದು ಪ್ರಶಾಂತ್ ಕಿಣಿ ಅವರೇ ತಮ್ಮ ಹಳೆಯ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ಈಗ ಮತ್ತೊಮ್ಮೆ ಹಂಚಿಕೊಂಡಿದ್ದಾರೆ (Re-post). ಆದರೆ, ಇದೇ ಭವಿಷ್ಯದಲ್ಲಿ ಅವರು ಇನ್ನುಳಿದ ಕೆಲವು ಕಳವಳಕಾರಿ ವಿಷಯಗಳನ್ನೂ ಉಲ್ಲೇಖಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಅಧಿಕಾರ ಹೋದ ನಂತರ ರಾಜ್ಯ ಕಾಂಗ್ರೆಸ್ ಪಕ್ಷವು ಇಬ್ಭಾಗವಾಗಲಿದೆ ಹಾಗೂ ಇದರಿಂದ ಕರ್ನಾಟಕದ ಜನತೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಮೈಸೂರು ಭಾಗಕ್ಕೆ ಮುಂದಿನ ದಿನಗಳಲ್ಲಿ ಭಾರಿ ತೊಂದರೆ ಎದುರಾಗಲಿದೆ ಮತ್ತು ಭವಿಷ್ಯದಲ್ಲಿ ಕರ್ನಾಟಕ ರಾಜ್ಯವೇ ಎರಡು ಭಾಗ ಆಗಲಿದೆ ಎಂದೂ ಅವರು ನುಡಿದಿರುವ ಭವಿಷ್ಯ ಈಗ ಆತಂಕ ಹಾಗೂ ಕುತೂಹಲವನ್ನು ಒಟ್ಟಿಗೇ ಸೃಷ್ಟಿಸಿದೆ.

ಇನ್ನೊಂದೆಡೆ, ಕಳೆದ ೨೦೨೩ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ಜ್ಯೋತಿಷಿ ಬಿ.ಬಿ. ಆರಾಧ್ಯ ಅವರು ನುಡಿದಿದ್ದ ಭವಿಷ್ಯದ ವಿಡಿಯೋ ಕೂಡ ಈಗ ಮುನ್ನೆಲೆಗೆ ಬಂದಿದೆ. ಅಂದು ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಅವರ ಜಾತಕವನ್ನು ಆಳವಾಗಿ ವಿಶ್ಲೇಷಿಸಿದ್ದ ಆರಾಧ್ಯ, ನಿಮ್ಮ ರಾಜಕೀಯ ಭವಿಷ್ಯವು ಅತ್ಯಂತ ಪ್ರಕಾಶಮಾನವಾಗಿದೆ ಎಂದು ಧೈರ್ಯ ತುಂಬಿದ್ದರು. ಸದ್ಯದ ರಾಜಕೀಯ ಪರಿಸ್ಥಿತಿ ಏನೇ ಇದ್ದರೂ, ಚುನಾವಣೆಯಾಗಿ ಸರಿಯಾಗಿ ಎರಡು ವರ್ಷಗಳ ಬಳಿಕ ನೀವು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದೀರಿ ಎಂದು ಅಂದೇ ಲೆಕ್ಕಾಚಾರ ಹಾಕಿದ್ದರು. ಅಷ್ಟೇ ಅಲ್ಲದೆ, ೨೦೨೫ರ ಅವಧಿಯ ನಂತರ ನೀವು ಅಧಿಕಾರಕ್ಕೆ ಬಂದು ಸತತ ಎಂಟು ವರ್ಷಗಳ ಕಾಲ ರಾಜ್ಯದ ಸಾರಥಿಯಾಗಿ ಸುದೀರ್ಘ ಆಡಳಿತ ನಡೆಸಲಿದ್ದೀರಿ ಎಂದು ಡಿ.ಕೆ. ಶಿವಕುಮಾರ್ ಅವರ ರಾಜಯೋಗದ ಬಗ್ಗೆ ಬಿ.ಬಿ. ಆರಾಧ್ಯ ಹೇಳಿದ್ದ ಮಾತುಗಳು ಈಗ ಸತ್ಯಕ್ಕೆ ಹತ್ತಿರವಾಗುತ್ತಿರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಚಿತಪಡಿಸಿದ ದೇಶಪಾಂಡೆ

Leave a Reply

Your email address will not be published. Required fields are marked *