ಉತ್ತರ ಪ್ರದೇಶ: ವರದಕ್ಷಿಣೆ ಎಂಬ ಸಾಮಾಜಿಕ (Crime) ಪಿಡುಗು ಇಂದಿನ ಆಧುನಿಕ ಜಗತ್ತಿನಲ್ಲೂ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವರನ ಕಡೆಯವರು ಮದುವೆ ಮಂಟಪದಲ್ಲೇ ದಿಢೀರನೆ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಭೀಕರ ಹೊಡೆದಾಟ ನಡೆದಿದ್ದು, ಸುಂದರ ಮದುವೆ ಮನೆ ನೋಡನೋಡುತ್ತಿದ್ದಂತೆಯೇ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.
ಹಾರ ಬದಲಾಯಿಸುವ ಹಣಕ್ಕೆ ಬೇಡಿಕೆ ಇಟ್ಟ ವರನ ಕುಟುಂಬ
ಝಾನ್ಸಿಯ ಪ್ರೇಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುಬನ್ ಗಾರ್ಡನ್‌ನಲ್ಲಿ ಈ ಹೈಡ್ರಾಮಾ ಸಂಭವಿಸಿದೆ. ವರದಿಗಳ ಪ್ರಕಾರ, ಮದುವೆಯ ಪ್ರಮುಖ ಶಾಸ್ತ್ರವಾದ ‘ಜೈಮಾಲಾ’ (ಹಾರ ಬದಲಾಯಿಸುವಿಕೆ) ಕಾರ್ಯಕ್ರಮವು ಅತ್ಯಂತ ಸಡಗರದಿಂದ ನೆರವೇರಿತ್ತು. ಆದರೆ ಈ ಶುಭ ಕಾರ್ಯ ಮುಗಿಯುತ್ತಿದ್ದಂತೆ ವರನ ಪೋಷಕರು ವಧುವಿನ ಪೋಷಕರನ್ನು ಕರೆದು ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಪೀಡಿಸಲು ಆರಂಭಿಸಿದ್ದಾರೆ. ಇದು ಆರಂಭದಲ್ಲಿ ಸಾಮಾನ್ಯ ಮಾತಿನ ಚಕಮಕಿಗೆ ಕಾರಣವಾಯಿತಾದರೂ, ಕ್ಷಣಾರ್ಧದಲ್ಲಿ ಇಡೀ ಕಲ್ಯಾಣ ಮಂಟಪದೊಳಗೆ ಭೀಕರ ಗಲಾಟೆಯಾಗಿ ರೂಪಾಂತರಗೊಂಡಿದೆ. ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿರುವ ೨೬ ಸೆಕೆಂಡುಗಳ ವಿಡಿಯೋದಲ್ಲಿ, ವೇದಿಕೆಯ ಬಳಿ ಮದುವೆಗೆ ಬಂದವರು ಪರಸ್ಪರ ತಳ್ಳಾಡುತ್ತಾ, ಉಡುಪುಗಳನ್ನು ಹಿಡಿದು ಜಗ್ಗಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಗಲಾಟೆ ಬಿಡಿಸಲು ಕೆಲವರು ಯತ್ನಿಸಿದರೂ ಆಕ್ರೋಶ ತಣ್ಣಗಾಗಿರಲಿಲ್ಲ. ಪರಸ್ಪರ ಕುರ್ಚಿ ಹಾಗೂ ಮದುವೆ ಪರಿಕರಗಳನ್ನು ಎಸೆದಾಡಿಕೊಂಡಿದ್ದರಿಂದ, ಅತಿಥಿಗಳು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
झांसी में शादी समारोह के दौरान जयमाला के तुरंत बाद दूल्हा पक्ष ने अतिरिक्त दहेज की मांग कर दी, जिससे दोनों पक्षों में भारी विवाद खड़ा हो गया।#Jhansi #DowryCase #WeddingDispute pic.twitter.com/505oX7VcQf
— TheSootr (@TheSootr) May 27, 2026
ಮದುವೆ ಮನೆಯ ಗಲಾಟೆ ಮತ್ತು ವರನ ಕಡೆಯವರ ದುರಾಶೆ ಮಿತಿಮೀರಿದಾಗ, ವಧು ಅತ್ಯಂತ ಧೈರ್ಯಶಾಲಿ ನಿರ್ಧಾರವೊಂದನ್ನು ಕೈಗೊಂಡಿದ್ದಾಳೆ. ಹಣದ ಹಪಹಪಿತನ ಹೊಂದಿರುವ ಇಂತಹ ಕುಟುಂಬದ ಜೊತೆ ತಾನು ಯಾವುದೇ ಕಾರಣಕ್ಕೂ ಜೀವನ ನಡೆಸಲಾರೆ ಎಂದು ಗಟ್ಟಿಯಾಗಿ ಸಾರಿದ ಆಕೆ, ಮದುವೆ ಶಾಸ್ತ್ರಗಳನ್ನು ಅರ್ಧಕ್ಕೇ ನಿಲ್ಲಿಸಿ ವಿವಾಹವನ್ನು ಸಾರಾಸಗಟಾಗಿ ನಿರಾಕರಿಸಿದ್ದಾಳೆ. ವರನ ಜೊತೆ ಹೋಗದೆ ತನ್ನ ಹೆತ್ತವರ ಕೈಹಿಡಿದು ನಿಂತ ವಧುವಿನ ಈ ದಿಟ್ಟ ನಡೆ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ವರನ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದು, ವಧುವಿನ ಸ್ವಾಭಿಮಾನಿ ನಿರ್ಧಾರಕ್ಕೆ ಜೈ ಎನ್ನುತ್ತಿದ್ದಾರೆ.
