TOP NEWS

Congress: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಚಿತಪಡಿಸಿದ ದೇಶಪಾಂಡೆ

congress leader v Deshpande confirms cm Siddaramaiah resignation

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ನಾಟಕೀಯ (Congress) ಬೆಳವಣಿಗೆಗಳು ಜರುಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಈಗ ಹೆಚ್ಚೂ ಕಡಿಮೆ ಅಧಿಕೃತಗೊಂಡಿದೆ. ಇದುವರೆಗೆ ಕೇವಲ ಊಹಾಪೋಹವಾಗಿದ್ದ ರಾಜೀನಾಮೆ ಸುದ್ದಿಗೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ಮಾಧ್ಯಮಗಳ ಮುಂದೆ ಸ್ಫೋಟಕ ಸತ್ಯ ಬಿಚ್ಚಿಡುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿಯಲ್ಲೇ ಹೈಕಮಾಂಡ್ ಮುಂದೆ ತಿಳಿಸಿ ಬಂದಿದ್ದಾರೆ ಎಂದು ದೇಶಪಾಂಡೆ ಹೇಳಿರುವುದು ಭಾರಿ ಸಂಚಲನ ಸೃಷ್ಟಿಸಿದೆ.

ಆರ್‌ವಿ ದೇಶಪಾಂಡೆ ಹೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿದ ನಂತರ ಅತ್ಯಂತ ಗಂಭೀರವಾಗಿ ಮಾತನಾಡಿದ ಆರ್.ವಿ. ದೇಶಪಾಂಡೆ, ಮುಖ್ಯಮಂತ್ರಿಯವರು ದೆಹಲಿಯಿಂದ ಬಂದ ಮೇಲೆ ನಮ್ಮನ್ನು ಭೇಟಿಯಾದಾಗ ತಾವಾಗಿಯೇ ಈ ವಿಷಯ ಹಂಚಿಕೊಂಡಿದ್ದಾರೆ. “ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ” ಅಂತ ದೆಹಲಿಯಲ್ಲೇ ಹೇಳಿ ಬಂದಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ, ನಾಳೆಯೇ (ಗುರುವಾರ) ರಾಜೀನಾಮೆ ನೀಡುತ್ತಿರುವುದಾಗಿ ಸಿಎಂ ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ನಾವುಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಕಾರಣಕ್ಕೂ ಈಗಲೇ ರಾಜೀನಾಮೆ ಕೊಡಬೇಡಿ ಅಂತ ಬಲವಂತವಾಗಿ ಒತ್ತಾಯ ಮಾಡಿದ್ದೇವೆ ಎಂದು ದೇಶಪಾಂಡೆ ಬಹಿರಂಗಪಡಿಸಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಳಿಕ ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಮಾಧ್ಯಮಗಳ ಎದುರು ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಸಿಎಂ ರಾಜೀನಾಮೆ ಕುರಿತು ಬರುತ್ತಿರುವ ಸರಣಿ ಸುದ್ದಿಗಳನ್ನು ನೋಡಿ ತಮಗೂ ಸಹಜವಾಗಿಯೇ ತೀವ್ರ ಆತಂಕ ಉಂಟಾಗಿದ್ದರಿಂದ ನೇರವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದಿದ್ದೆವು ಎಂದು ಅವರು ತಿಳಿಸಿದರು. ನಮ್ಮ ಮನದಲ್ಲಿದ್ದ ಕಳವಳ ಹಾಗೂ ಕಳಕಳಿಯ ಮನವಿಯನ್ನು ಅವರ ಮುಂದೆ ಸುದೀರ್ಘವಾಗಿ ಇಟ್ಟು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಒತ್ತಾಯಿಸಿದೆವು. ಆದರೆ, ನಮ್ಮ ಇಷ್ಟೂ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಒಂದು ಮಾತನ್ನೂ ಆಡದೆ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ ಎಂದು ಎಚ್.ಕೆ. ಪಾಟೀಲ್ ಆತಂಕ ಹೊರಹಾಕಿದ್ದಾರೆ.

ಆರ್.ವಿ. ದೇಶಪಾಂಡೆ ಅವರ ಈ ಖಡಕ್ ಹೇಳಿಕೆ ಮತ್ತು ಎಚ್.ಕೆ. ಪಾಟೀಲ್ ಅವರು ವಿವರಿಸಿದ ಮುಖ್ಯಮಂತ್ರಿಗಳ ನಿಗೂಢ ಮೌನವನ್ನು ಗಮನಿಸಿದರೆ, ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ಸಂಪೂರ್ಣವಾಗಿ ತಲೆಬಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಒಳಗಿಲಾ ಮೂಲಗಳ ಪ್ರಕಾರ, ನಾಳೆ ರಾಜ್ಯದ ಹಿರಿಯ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ತಕ್ಷಣವೇ ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರ ಅಧಿಕೃತವಾಗಿ ರಾಜಭವನ ತಲುಪುವುದು ನೂರಕ್ಕೆ ನೂರರಷ್ಟು ಖಚಿತ ಎನ್ನಲಾಗುತ್ತಿದ್ದು, ಕುರ್ಚಿ ಕದನ ಕೊನೆಯ ಹಂತ ತಲುಪಿದೆ.

ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಒಲ್ಲೆ: ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭಾ ಆಫರ್ ನಿರಾಕರಣೆ

Leave a Reply

Your email address will not be published. Required fields are marked *