ಲಂಡನ್: ಪ್ರಸ್ತುತ ಜಗತ್ತಿನಲ್ಲಿ ಮಾನಸಿಕ ಆರೋಗ್ಯದ (Mental Health) ಸಮಸ್ಯೆಗಳು ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಭವಿಷ್ಯದ ದಿನಗಳಲ್ಲಿ ಇದು ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ. ಪ್ರತಿಷ್ಠಿತ ‘ದಿ ಲ್ಯಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಇತ್ತೀಚಿನ ಜಾಗತಿಕ ಸಂಶೋಧನಾ ವರದಿಯ ಪ್ರಕಾರ, ಕಳೆದ ೨೦೨೩ ರ ಸಾಲಿನಲ್ಲಿ ವಿಶ್ವಾದ್ಯಂತ ಸುಮಾರು ೧೨೦ ಕೋಟಿ ಜನರು ವಿವಿಧ ರೀತಿಯ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯೂಯೇಷನ್ ನೇತೃತ್ವದಲ್ಲಿ ನಡೆದ ಈ ಬೃಹತ್ ಜಾಗತಿಕ ಅಧ್ಯಯನವು ಒಟ್ಟು ೨೦೪ ದೇಶಗಳ ದತ್ತಾಂಶಗಳನ್ನು ವಿಶ್ಲೇಷಿಸಿದೆ. ೧೯೯೦ ನೇ ಇಸವಿಗೆ ಹೋಲಿಸಿದರೆ ಪ್ರಸ್ತುತ ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಬರೋಬ್ಬರಿ ಶೇಕಡಾ ೯೫.೫ ರಷ್ಟು ಭಾರಿ ಏರಿಕೆಯಾಗಿದ್ದು, ಕೇವಲ ಮೂರು ದಶಕಗಳ ಅವಧಿಯಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿರುವುದು ವಿಜ್ಞಾನಿಗಳನ್ನು ಬೆಚ್ಚಿಬೀಳಿಸಿದೆ.
ಈ ಸಂಶೋಧನೆಯ ಮುಖ್ಯ ಲೇಖಕರಾದ ಪ್ರೊಫೆಸರ್ ಡೇಮಿಯನ್ ಸಾಂಟೊಮಾರೊ ಅವರ ಪ್ರಕಾರ, ಮಾನಸಿಕ ಕಾಯಿಲೆಗಳ ಪೈಕಿ ತೀವ್ರ ಆತಂಕ (ಆಂಗ್ಸೈಟಿ) ಮತ್ತು ಖಿನ್ನತೆ (ಡಿಪ್ರೆಶನ್) ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕಾಡುತ್ತಿವೆ. ೧೯೯೦ ಕ್ಕೆ ಹೋಲಿಸಿದರೆ ಆತಂಕದ ಪ್ರಕರಣಗಳಲ್ಲಿ ಶೇಕಡಾ ೧೫೮ ರಷ್ಟು ಮತ್ತು ಖಿನ್ನತೆಯಲ್ಲಿ ಶೇಕಡಾ ೧೩೧ ರಷ್ಟು ಭಾರಿ ಹೆಚ್ಚಳ ದಾಖಲಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ವ್ಯಕ್ತಿತ್ವ ಅಸ್ವಸ್ಥತೆಗಳು (ಪರ್ಸನಾಲಿಟಿ ಡಿಸಾರ್ಡರ್ಸ್) ಕಂಡುಬಂದಿವೆ. ಉಳಿದಂತೆ ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ಆಟಿಸಂ ಹಾಗೂ ತಿನ್ನುವ ಹವ್ಯಾಸದ ಅಸ್ವಸ್ಥತೆಗಳಾದ ಅನೊರೆಕ್ಸಿಯಾ ಮತ್ತು ಬುಲಿಮಿಯಾಗಳು ಕೂಡ ಗಣನೀಯವಾಗಿ ಹೆಚ್ಚುತ್ತಿವೆ. ಲಿಂಗದ ಆಧಾರದಲ್ಲಿ ನೋಡುವುದಾದರೆ ಬಹುತೇಕ ಮಾನಸಿಕ ಕಾಯಿಲೆಗಳು ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತವೆಯಾದರೂ, ಆಟಿಸಂ, ಎಡಿಎಚ್‌ಡಿ ಮತ್ತು ನಡವಳಿಕೆಯ ಅಸ್ವಸ್ಥತೆಗಳು ಪುರುಷರಲ್ಲಿ ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ.
ಹದಿಹರೆಯದವರಲ್ಲೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣ: ಈ ಜಾಗತಿಕ ಅಧ್ಯಯನದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾನಸಿಕ ಕಾಯಿಲೆಯ ಹೊರೆಯು ೧೫ ರಿಂದ ೧೯ ವರ್ಷದೊಳಗಿನ ಹದಿಹರೆಯದ ಯುವ ಪೀಳಿಗೆಯಲ್ಲಿ ಅತ್ಯಂತ ಗರಿಷ್ಠ ಮಟ್ಟ ತಲುಪಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತಿಹಾಸದಲ್ಲಿ ಈ ಹಿಂದೆಂದೂ ಇಷ್ಟು ಚಿಕ್ಕ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರಲಿಲ್ಲ, ಸಾಮಾನ್ಯವಾಗಿ ಇದು ಮಧ್ಯವಯಸ್ಕರಲ್ಲಿ ಹೆಚ್ಚಿರುತ್ತಿತ್ತು ಎಂದು ಸಾಂಟೊಮಾರೊ ತಿಳಿಸಿದ್ದಾರೆ. ಈ ವಯಸ್ಸು ಮನುಷ್ಯನ ಮೆದುಳು ಹಾಗೂ ಸಾಮಾಜಿಕ ಕೌಶಲಗಳ ಬೆಳವಣಿಗೆಗೆ ಅತ್ಯಂತ ನಿರ್ಣಾಯಕ ಹಂತವಾಗಿದ್ದು, ಈ ಸಮಯದಲ್ಲಿ ಉಂಟಾಗುವ ಮಾನಸಿಕ ಅಸ್ಥಿರತೆಯು ಅವರ ಇಡೀ ಭವಿಷ್ಯದ ಮೇಲೆ ದೀರ್ಘಕಾಲದ ದುಷ್ಪರಿಣಾಮ ಬೀರುತ್ತದೆ ಎಂದು ಮನೋವೈದ್ಯರು ಎಚ್ಚರಿಸಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕದ ನಂತರ ಜಗತ್ತಿನಲ್ಲಿ ಖಿನ್ನತೆ ಮತ್ತು ಆತಂಕದ ಪ್ರಮಾಣವು ಎಂದಿಗೂ ಹಳೆಯ ಸಾಮಾನ್ಯ ಸ್ಥಿತಿಗೆ ಮರಳದೆ ಗರಿಷ್ಠ ಮಟ್ಟದಲ್ಲೇ ಮುಂದುವರಿದಿರುವುದು ವರದಿಯಲ್ಲಿ ದೃಢಪಟ್ಟಿದೆ.
ಆರ್ಥಿಕ ಅಸ್ಥಿರತೆ, ಕೌಟುಂಬಿಕ ದೌರ್ಜನ್ಯ, ಕಳಪೆ ಆರೋಗ್ಯ ವ್ಯವಸ್ಥೆ, ರಾಜಕೀಯ ಸಂಘರ್ಷಗಳು, ಯುದ್ಧ, ಆಹಾರದ ಅಭದ್ರತೆ ಮತ್ತು ಕ್ಷೀಣಿಸುತ್ತಿರುವ ಸಾಮಾಜಿಕ ಬಾಂಧವ್ಯಗಳು ಇಂದಿನ ಯುವ ಪೀಳಿಗೆಯನ್ನು ತೀವ್ರವಾಗಿ ಕಾಡುತ್ತಿವೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಲು ಕೇವಲ ನಕಾರಾತ್ಮಕ ಅಂಶಗಳಷ್ಟೇ ಕಾರಣವಲ್ಲ, ಬದಲಿಗೆ ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಇದ್ದ ಕೀಳರಿಮೆ ಕಡಿಮೆಯಾಗುತ್ತಿರುವುದು ಕೂಡ ಕಾರಣವಾಗಿದೆ. ಜನರು ಈಗ ಮುಕ್ತವಾಗಿ ಮುಂದೆ ಬಂದು ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಪಡೆಯುತ್ತಿರುವುದರಿಂದ ಹಾಗೂ ವೈದ್ಯಕೀಯ ರೋಗನಿರ್ಣಯ ಪದ್ಧತಿ ಸುಧಾರಿಸಿರುವುದರಿಂದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದಾಗ್ಯೂ, ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ವೇಗಕ್ಕೆ ತಕ್ಕಂತೆ ವಿಶ್ವದ ಯಾವುದೇ ದೇಶಗಳೂ ತಮ್ಮ ಮಾನಸಿಕ ಆರೋಗ್ಯ ಸೇವೆಗಳನ್ನು ವಿಸ್ತರಿಸುತ್ತಿಲ್ಲ ಎಂದು ತಜ್ಞರು ವಿಷಾದಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಔಷಧಿಗಳಷ್ಟೇ ಅಲ್ಲದೆ, ಉತ್ತಮ ಆಹಾರ ಪದ್ಧತಿ, ನಿಯಮಿತ ದೈಹಿಕ ವ್ಯಾಯಾಮ, ಗಾಢವಾದ ನಿದ್ದೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದು ಸಂಶೋಧನಾ ವರದಿ ಕರೆ ನೀಡಿದೆ.
ಇದನ್ನೂ ಓದಿ: ಜಾಗತಿಕ ಕ್ಯಾನ್ಸರ್ ತಡೆಗೆ ದೊಡ್ಡ ಆಶಾಕಿರಣ: ಶೇ. 40 ರಷ್ಟು ಪ್ರಕರಣಗಳನ್ನು ಆರಂಭದಲ್ಲೇ ತಡೆಯಬಹುದಂತೆ
