ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇವಲ ಎಂಟು ದಿನಗಳ ಅವಧಿಯಲ್ಲಿ ಇಂಧನ ಬೆಲೆಗಳನ್ನು ಮೂರು ಬಾರಿ ಹೆಚ್ಚಿಸಿರುವುದು ಜನಸಾಮಾನ್ಯರ ಕಷ್ಟದ ಗಳಿಕೆಯನ್ನು ಕಂತುಗಳ ರೂಪದಲ್ಲಿ ಲೂಟಿ ಮಾಡುವ ತಂತ್ರ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಜಾಗತಿಕವಾಗಿ ಹಲವು ದೇಶಗಳು ತಮ್ಮ ನಾಗರಿಕರಿಗೆ ತೈಲ ದರದಲ್ಲಿ ವಿನಾಯಿತಿ ನೀಡುತ್ತಿದ್ದರೆ, ಭಾರತದಲ್ಲಿ ಮಾತ್ರ ಸಾರ್ವಜನಿಕರ ಮೇಲೆ ನಿರಂತರವಾಗಿ ಆರ್ಥಿಕ ಹೊರೆಯನ್ನು ಹೇರಲಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಇಂಧನ ದರಗಳ ಬೆನ್ನಲ್ಲೇ ದೇಶದ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ದರವನ್ನು ಕೂಡ ದಿಢೀರನೆ ಹೆಚ್ಚಿಸಲಾಗಿದ್ದು, ವಾಹನ ಸವಾರರಿಗೆ ಮತ್ತೊಂದು ಆಘಾತ ಎದುರಾಗಿದೆ. ಪ್ರಮುಖ ಅನಿಲ ವಿತರಕ ಸಂಸ್ಥೆಯಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 1 ರೂಪಾಯಿಯಷ್ಟು ಏರಿಕೆ ಮಾಡಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣ, ಇರಾನ್ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಜಾಗತಿಕವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದು ಆಮದು ವೆಚ್ಚವನ್ನು ಹೆಚ್ಚಿಸಿದೆ. ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರಿದೂಗಿಸಲು ಇಂಧನ ಕಂಪನಿಗಳು ದರ ಪರಿಷ್ಕರಣೆಯ ಮೊರೆ ಹೋಗಿವೆ.
ಈ ನೂತನ ದರ ಏರಿಕೆಯ ನಂತರ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 80.09 ರೂಪಾಯಿಗೆ ತಲುಪಿದೆ. ಈ ದರ ಪರಿಷ್ಕರಣೆಯು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿರದೆ, ಸುತ್ತಮುತ್ತಲಿನ ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆರ್) ನಗರಗಳಿಗೂ ಅನ್ವಯಿಸಿದೆ. ಸದ್ಯ ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ಪ್ರತಿ ಕೆಜಿ ಸಿಎನ್‌ಜಿ ದರ ೮೮.೭೦ ರೂಪಾಯಿಗೆ ತಲುಪಿದ್ದರೆ, ಗುರುಗ್ರಾಮದಲ್ಲಿ ಇದರ ಬೆಲೆ 85.12 ರೂಪಾಯಿಯಾಗಿದೆ.
ಸಿಎನ್‌ಜಿ ದರದಲ್ಲಿ ಸತತವಾಗಿ ಆಗುತ್ತಿರುವ ಈ ಏರಿಕೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸಾವಿರಾರು ಆಟೋಗಳು, ಟ್ಯಾಕ್ಸಿಗಳು ಹಾಗೂ ಪ್ರಮುಖ ಸಾರಿಗೆ ಬಸ್‌ಗಳು ಸಿಎನ್‌ಜಿ ಇಂಧನವನ್ನೇ ಪ್ರಮುಖವಾಗಿ ಅವಲಂಬಿಸಿವೆ. ಇಂಧನ ಬೆಲೆ ಹೆಚ್ಚಿರುವುದರಿಂದ ಮುಂಬರುವ ದಿನಗಳಲ್ಲಿ ಆಟೋ ಹಾಗೂ ಟ್ಯಾಕ್ಸಿ ಪ್ರಯಾಣ ದರಗಳು ಕೂಡ ದುಬಾರಿಯಾಗುವ ಆತಂಕ ಎದುರಾಗಿದ್ದು, ಇದು ನಿತ್ಯ ಪ್ರಯಾಣಿಸುವ ಸಾಮಾನ್ಯ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಲಿದೆ.
ಸಾಮಾನ್ಯರಿಗೆ ತೈಲ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಏರಿಕೆಯ ಮುನ್ಸೂಚನೆ!
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಿದ್ದರೂ ಭಾರತದಲ್ಲಿ (Fuel Price) ಬೆಲೆ ಏರಿಕೆ ಮಾಡದ ಕಾರಣ, ದೇಶದ ಪ್ರಮುಖ ತೈಲ ಮಾರಾಟ ಸಂಸ್ಥೆಗಳಾದ IOCL, BPCL ಮತ್ತು HPCL ಅಕ್ಷರಶಃ ನಷ್ಟದ ಸುಳಿಗೆ ಸಿಲುಕಿವೆ. ಲಭ್ಯವಿರುವ ಮಾಹಿತಿಯಂತೆ ಈ ಕಂಪನಿಗಳು ಪ್ರತಿನಿತ್ಯ 1,600 ಕೋಟಿ ರೂಪಾಯಿಗೂ ಅಧಿಕ ನಷ್ಟ ಭರಿಸುತ್ತಿವೆ.
ದಿನಬಳಕೆ ವಸ್ತುಗಳ ಬೆಲೆ ಏರಿಕೆ ಭೀತಿ
ಇತ್ತೀಚೆಗಷ್ಟೇ ತೈಲ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಲಾಗಿತ್ತಾದರೂ, ಅದು ತೈಲ ಕಂಪನಿಗಳ ಬೃಹತ್ ನಷ್ಟವನ್ನು ತುಂಬಲು ಏನೇನೂ ಸಾಲದಾಗಿದೆ. ಈ ನಷ್ಟದ ಸರಪಳಿ ಮುಂದುವರಿದರೆ, ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಹೆಚ್ಚಾಗುವುದು ಬಹುತೇಕ ಖಚಿತ. ಇದರಿಂದ ಸಾಗಾಣಿಕಾ ವೆಚ್ಚ ಅಧಿಕವಾಗಿ, ದಿನಸಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುವ ಆತಂಕ ಸೃಷ್ಟಿಯಾಗಿದೆ.
ಬೆಲೆ ಏರಿಕೆಯ ಹಿಂದಿನ ಅಸಲಿ ಕಾರಣಗಳೇನು?
- ಜಾಗತಿಕ ಯುದ್ಧದ ನೆರಳು: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
- ಪೂರೈಕೆ ಮಾರ್ಗದಲ್ಲಿ ಅಡಚಣೆ: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಹಾದಿಯಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಉಂಟಾಗಿರುವ ಅಡೆತಡೆಗಳು ಕಚ್ಚಾ ತೈಲದ ಬೆಲೆಯನ್ನು ಗಗನಕ್ಕೇರಿಸಿವೆ.
- ಚುನಾವಣಾ ರಾಜಕೀಯ: ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ತಟಸ್ಥವಾಗಿದ್ದ ತೈಲ ದರಗಳು, ಈಗ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಏರಿಕೆಯ ಹಾದಿ ಹಿಡಿದಿವೆ.
