ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಬೆಚ್ಚಿಬೀಳಿಸಿದ್ದ ಭಾರಿ ಮಳೆಗೆ ಸದ್ಯದಲ್ಲೇ (Rain Update) ಬಿಡುವು ಸಿಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮುಂದುವರಿದಿರುವ ವರುಣನ ಆರ್ಭಟ ಇನ್ನು ಕೇವಲ ಎರಡು ದಿನಗಳು ಮಾತ್ರ ಇರಲಿದ್ದು, ಆ ಬಳಿಕ ಮಳೆಯ ತೀವ್ರತೆ ತಗ್ಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಲತಾ ಮುನ್ಸೂಚನೆ ನೀಡಿದ್ದಾರೆ.
ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯದ ಒಟ್ಟು 7 ಜಿಲ್ಲೆಗಳಲ್ಲಿ ಮುಡುಬಿಡದೆ ಮಳೆ ಸುರಿಯುವ ಸಂಭವವಿದ್ದು, ಮುನ್ನೆಚ್ಚರಿಕೆಯಾಗಿ ‘ಆರೆಂಜ್ ಅಲರ್ಟ್’ ಜಾರಿಗೊಳಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲೂ ಉತ್ತಮ ಮಳೆಯಾಗಲಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ: ಮಳೆಯ ಜೊತೆಗೆ ಕರಾವಳಿ ತೀರ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಾಗ್ರತೆ ವಹಿಸಲು ಕೋರಲಾಗಿದೆ. ಜುಲೈ 10ರಂದು ಕರಾವಳಿ ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಿಗೆ ಮಾತ್ರ ಯೆಲ್ಲೋ ಅಲರ್ಟ್ ಅನ್ವಯವಾಗಲಿದೆ.
ಜುಲೈ 11ರಿಂದ ಒಣಹವೆ: ಆದರೆ, ಜುಲೈ 11ರಿಂದ ಇಡೀ ರಾಜ್ಯದಲ್ಲಿ ಹವಾಮಾನ ಬದಲಾಗಲಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ. ಆ ಬಳಿಕ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಕಂಡುಬರಲಿದೆ ಎಂದು ಡಾ. ಲತಾ ತಿಳಿಸಿದ್ದಾರೆ. ಇದೇ ವೇಳೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಸದ್ಯಕ್ಕೆ ಯಾವುದೇ ಭಾರಿ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
