ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Fuel Price) ಗಗನಕ್ಕೇರುತ್ತಿದ್ದರೂ ಭಾರತ ಸರ್ಕಾರ ತನ್ನ ನಾಗರಿಕರನ್ನು ಜಾಗತಿಕ ಇಂಧನ ಬಿಕ್ಕಟ್ಟಿನ ನೇರ ಹೊಡೆತದಿಂದ ಯಶಸ್ವಿಯಾಗಿ ಪಾರುಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದರೂ, ದೇಶದಲ್ಲಿ ಸತತ 79 ದಿನಗಳ ಕಾಲ ಇಂಧನ ದರಗಳನ್ನು ಹೆಚ್ಚಿಸದೆ ಸ್ಥಿರವಾಗಿ ಕಾಯ್ದುಕೊಳ್ಳಲಾಗಿತ್ತು. ಪ್ರಸ್ತುತ ಮೇ ತಿಂಗಳಿನಲ್ಲಿ 15, 19 ಮತ್ತು 23 ರಂದು ಮೂರು ಹಂತಗಳಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗಿದ್ದು, ಒಟ್ಟಾರೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಲೀಟರ್ಗೆ ಸುಮಾರು 4.74 ರೂ.ನಿಂದ 4.82 ರೂ.ವರೆಗೆ ಏರಿಕೆಯಾಗಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ವಿಶ್ವದ ಇತರೆ ದೇಶಗಳಲ್ಲಿ ಆಗಿರುವ ಭಾರಿ ದರ ಏರಿಕೆಗೆ ಹೋಲಿಸಿದರೆ ಭಾರತದಲ್ಲಿ ಆಗಿರುವ ಈ ಹೆಚ್ಚಳ ಅತ್ಯಲ್ಪ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಒಟ್ಟು 5 ರೂಪಾಯಿಯಷ್ಟು ಏರಿದ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಭಾರತದಲ್ಲಿ ಇಂಧನ ಬೆಲೆಗಳು ಕೇವಲ ಶೇಕಡಾ 5 ರಷ್ಟು ಮಾತ್ರ ಏರಿಕ ಕಂಡಿವೆ. ಆದರೆ ಇದೇ ಅವಧಿಯಲ್ಲಿ ನೆರೆ ದೇಶವಾದ ಪಾಕಿಸ್ತಾನದಲ್ಲಿ ಶೇ. 54. 9, ಅಮೆರಿಕದಲ್ಲಿ ಶೇ. 44.ರಷ್ಹಾಟು ಗೂ ಬ್ರಿಟನ್ನಲ್ಲಿ ಶೇ. 19.2 ರಷ್ಟು ಇಂಧನ ದರಗಳು ದುಬಾರಿಯಾಗಿವೆ ಎಂದು ಸರ್ಕಾರಿ ಮೂಲಗಳು ಅಂಕಿ-ಅಂಶಗಳನ್ನು ಹಂಚಿಕೊಂಡಿವೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ದೇಶದ ತೈಲ ಮಾರಾಟ ಕಂಪನಿಗಳು ದಿನಕ್ಕೆ ಸುಮಾರು 1000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದವು. ಹೀಗಾಗಿ ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದ್ದು, ಇತ್ತೀಚಿನ ದರ ಏರಿಕೆಯ ನಂತರ ಕಂಪನಿಗಳ ದೈನಂದಿನ ನಷ್ಟ 750 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಶನಿವಾರವೂ ಸಹ ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ 82 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ91 ಪೈಸೆ ಹೆಚ್ಚಳವಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಇಂಧನ ದರಗಳು ಲೀಟರ್ಗೆ ಒಟ್ಟು5 ರೂಪಾಯಿಯಷ್ಟು ಏರಿಕೆಯಾದಂತಾಗಿದೆ.
ಇದೇ ವೇಳೆ ಇಂಧನ ಮೇಲಿನ ತೆರಿಗೆ ವಿಚಾರವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ಮುಂಚೂಣಿಗೆ ತಂದಿದೆ. ತೆಲಂಗಾಣ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಸ್ಥಳೀಯ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹೆಚ್ಚಾಗಿರುವ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದೇಶದಲ್ಲೇ ಅತ್ಯಂತ ಗರಿಷ್ಠ ಮಟ್ಟದಲ್ಲಿವೆ. ಆದರೆ ಗುಜರಾತ್, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಗೋವಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಇಂಧನ ದರಗಳು ತುಲನಾತ್ಮಕವಾಗಿ ಕಡಿಮೆ ಇವೆ. ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕವು ದೇಶಾದ್ಯಂತ ಏಕರೂಪವಾಗಿದ್ದು, ಬೆಲೆ ವ್ಯತ್ಯಾಸಕ್ಕೆ ರಾಜ್ಯಗಳು ವಿಧಿಸುವ ವ್ಯಾಟ್ ತೆರಿಗೆಯೇ ಕಾರಣವಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಕೇಂದ್ರದ ತೆರಿಗೆ ಕಡಿತಕ್ಕೆ ಒತ್ತಾಯಿಸುತ್ತಿವೆಯೇ ಹೊರತು, ತಮ್ಮ ಮಟ್ಟದಲ್ಲಿ ವ್ಯಾಟ್ ಕಡಿಮೆ ಮಾಡುತ್ತಿಲ್ಲ ಎಂದು ಕೇಂದ್ರ ಆರೋಪಿಸಿದೆ. ಅಲ್ಲದೆ, ಕಳೆದ ಮಾರ್ಚ್ 2026 ರಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ೧೦ ರೂ. ಕಡಿತಗೊಳಿಸಿ, ಡೀಸೆಲ್ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಿತ್ತು. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ಸುಮಾರು ೩೦,೦೦೦ ಕೋಟಿ ರೂಪಾಯಿಗಳ ನೇರ ಆರ್ಥಿಕ ಹೊರೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯ ತೈಲ ಬಾಂಡ್ಗಳ ನೀತಿಗೂ ಮತ್ತು ತನ್ನ ಇಂದಿನ ಆಡಳಿತ ವೈಖರಿಗೂ ಇರುವ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ಎತ್ತಿ ತೋರಿಸಿದೆ. ತೈಲ ಕಂಪನಿಗಳಿಗೆ ಪರಿಹಾರ ನೀಡಲು ಯುಪಿಎ ಸರ್ಕಾರವು 2005 ರಿಂದ 2010 ರ ನಡುವೆ ಸುಮಾರು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ಬಾಂಡ್ಗಳನ್ನು ವಿತರಿಸಿತ್ತು. ಆದರೆ ಪ್ರಸ್ತುತ ಸರ್ಕಾರವು ಆ ಬಾಂಡ್ಗಳ ಅಸಲು ಮೊತ್ತದಲ್ಲಿ ಈಗಾಗಲೇ 1.30 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದೆ ಎಂದು ಹೆಳಿಕೊಂಡಿದೆ. ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳ ಸಂದರ್ಭದಲ್ಲೂ ಭಾರತವು ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಗ್ರಾಹಕರನ್ನು ಹಣದುಬ್ಬರದ ಆಘಾತದಿಂದ ರಕ್ಷಿಸಿದೆ. ಇಂತಹ ಜಾಗತಿಕ ಇಂಧನ ಬಿಕ್ಕಟ್ಟಿನ ಸಮಯದಲ್ಲಿ ಚಿಲ್ಲರೆ ಬೆಲೆಗಳನ್ನು ಇಷ್ಟು ಬಿಗಿಯಾಗಿ ನಿಯಂತ್ರಿಸಿದ ವಿಶ್ವದ ‘ಏಕೈಕ ಪ್ರಮುಖ ಆರ್ಥಿಕತೆ’ ಭಾರತವಾಗಿದೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳು ಹಾಗೂ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ಉಂಟಾದ ಅಡಚಣೆಗಳ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚು ದುಬಾರಿಯಾಗಿವೆ. ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿರುವುದರಿಂದ ತೈಲ, ಅನಿಲ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಜಾಗತಿಕ ಚಲನೆಗೆ ಭಾರಿ ಧಕ್ಕೆಯುಂಟಾಗಿದ್ದು, ಜಾಗತಿಕ ಇಂಧನ ಪೂರೈಕೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇಂಧನ ಆಮದು ವೆಚ್ಚಗಳು ಮತ್ತು ತೈಲ ಶುದ್ಧೀಕರಣದ ವೆಚ್ಚಗಳು ಹೆಚ್ಚಾಗಿದ್ದರೂ, ಗ್ರಾಹಕರನ್ನು ಬೆಲೆ ಏರಿಕೆಯ ಬಿಸಿಯಿಂದ ಕಾಪಾಡುವ ಉದ್ದೇಶದಿಂದ ತೈಲ ಮಾರಾಟ ಕಂಪನಿಗಳು ದೀರ್ಘಕಾಲದವರೆಗೆ ಇಂಧನ ದರಗಳನ್ನು ಹೆಚ್ಚಿಸದೆ ಸ್ಥಿರವಾಗಿಟ್ಟಿದ್ದವು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಇಂಧನ ದರ ಏರಿಕೆ ಬಿಸಿ: ಕೇಂದ್ರದ ವಿರುದ್ಧ ಖರ್ಗೆ ಆಕ್ರೋಶ
