TOP NEWS

Hirebhaskara: ಪ್ರವಾಸಿಗರಿಗೆ ಶಾಕಿಂಗ್‌ ಸುದ್ದಿ, ಹೀರೇಭಾಸ್ಕರ ಡ್ಯಾಮ್‌ಗೆ ನೋ ಎಂಟ್ರಿ

Wild life banned entry on hirebhaskara dam to tourist

ಶಿವಮೊಗ್ಗ: ಮಲೆನಾಡು ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳ. ಇಲ್ಲಿ ನೋಡಲು ಪ್ರಕೃತಿ ಸೌಂದರ್ಯ ಸವಿಯಲು ಸಮಯವೇ ಸಾಕಾಗುವುದಿಲ್ಲ, ಈಗಂತೂ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ದಂಡೇ ಸೇರಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆ ಹೋಗುವವರಿಗೆ ನಿರಾಸೆಯ ಸುದ್ದಿ ಒಂದಿದೆ. ಇತ್ತೀಚೆಗೆ ಬಹಳ ಫೇಮಸ್‌ ಆಗಿದ್ದ ಹೀರೇಭಾಸ್ಕರ (Hirebhaskara) ಡ್ಯಾಮ್‌ ಪ್ರವೇಶಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ನಿಷೇಧ ಹೇರಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದು ಡ್ಯಾಂ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅನೇಕ ಪ್ರಸಿದ್ದ ಸ್ಥಳಗಳಿದೆ. ಅದರಲ್ಲೂ ಕೆಲ ಸ್ಥಳಗಳು ಬಹಳ ಗೌಪ್ಯವಾಗಿ ಇದ್ದವು. ಅದರಲ್ಲಿ ಒಂದು ಈ ಹೀರೇ ಭಾಸ್ಕರ ಡ್ಯಾಮ್.‌ 1948ರಲ್ಲಿ ಕಟ್ಟಿ ಮುಗಿಸಿದ್ದ ಡ್ಯಾಮ್‌ ನಂತರ ಕಣ್ಮರೆಯಾಗಿತ್ತು. ಇದು ಯಾವುದೇ ಪ್ರವಾಸಿಗರ ಕಣ್ಣಿಗೆ ಸಹ ಬಿದ್ದಿರಲಿಲ್ಲ. ಸ್ಥಳೀಯರು ಮಾತ್ರ ಹೋಗಿ ಬರುತ್ತಿದ್ದರು. ಮಳೆಗಾಲದಲ್ಲಿ ಇದಕ್ಕೆ ಪ್ರವೇಶ ಕೂಡ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ, ರೀಲ್ಸ್‌ ಗಳ ಕಾರಣದಿಂದ ಇದಕ್ಕೆ ಜನಪ್ರಿಯತೆ ಸಿಕ್ಕಿತ್ತು. ಈ ಕಾರಣದಿಂದ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗಿತ್ತು. ಆದರೆ ಇದೀಗ, ಅರಣ್ಯ ಇಲಾಖೆ, ಇದಕ್ಕೆ ಬ್ರೇಕ್‌ ಹಾಕಿದೆ.

ಮಂಗನ ಕಾಯಿಲೆ ಭಯ

ಈ ಡ್ಯಾಮ್‌ ನೋಡಲು ಮುಖ್ಯವಾಗಿ ಅರಣ್ಯ ಪ್ರದೇಶವನ್ನ ಹಾದುಹೋಗಬೇಕು. ಈ ಸ್ಥಳ ಅರಣ್ಯ ಇಲಾಖೆಯ ರಕ್ಷಣೆಯಲ್ಲಿದೆ. ಇದನ್ನ ಅರಣ್ಯ ಇಲಾಖೆ ಪ್ರವಾಸಿ ತಾಣ ಎಂದು ಘೋಷಣೆ ಸಹ ಮಾಡಿರಲಿಲ್ಲ. ಆದರೂ ಸಹ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ಗಮನಿಸಿದ ವನ್ಯಜೀವಿ ವಿಭಾಗ ನಿಷೇಧ ಹೇರಿದೆ ಎನ್ನಲಾಗುತ್ತಿದೆ. ಮುಖ್ಯವಾಗಿ ಅರಣ್ಯ ಪ್ರದೇಶ ಆಗಿರುವುದರಿಂದ ಜನರಿಗೆ ಯಾವುದೇ ತೊಂದರೆಗಳು ಆಗಬಾರದು ಎನ್ನುವ ಉದ್ದೇಶ ಇದರ ಹಿಂದಿದೆ. ವನ್ಯಜೀವಿಗಳ ಓಡಾಟ ಸಹ ಇರುವುದರಿಂದ ಅನಾಹುತವನ್ನ ತಪ್ಪಿಸಲು, ಜನರ ಹಿತದೃಷ್ಟಿಯಿಂದ ಮುಂಜಾಗ್ರತೆಯ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ.

ಇದರ ಜೊತೆಗೆ ಮತ್ತೊಂದು ಸಮಸ್ಯೆ ಸಹ ಕಾಡುತ್ತಿದೆ. ಇಲ್ಲಿನ ಜನರನ್ನ ವರ್ಷಗಳಿಂದ ಬಾಧಿಸುತ್ತಿರುವ ಮಂಗನಕಾಯಿಲೆ ಮತ್ತೆ ಹೆಚ್ಚಾಗುತ್ತಿದೆ, ಆ ಪ್ರದೇಶದಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಅರಣ್ಯ ಇಲಾಖೆ ಗೇಟ್‌ ಮುಚ್ಚಿದ್ದು, ಸುತ್ತಮುತ್ತಲಿನ 500 ಮೀ ಅಂತರದಲ್ಲಿ ಜನರಿಗೆ ಬರದಂತೆ ಮನವಿ ಮಾಡಿದೆ. ಒಟ್ಟಾರೆ ಜನರಿಗಾಗಿ ಅರಣ್ಯ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ವರದಿ: ಪ್ರಶಾಂತ್‌ ಭಟ್

ಇದನ್ನೂ ಓದಿ: ಇಂಧನ ದರ ಏರಿಕೆ: ತೆರಿಗೆ ಕಡಿತಕ್ಕೆ ವಿಜಯೇಂದ್ರ ಒತ್ತಾಯ

Leave a Reply

Your email address will not be published. Required fields are marked *