TOP NEWS

GBA: ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬ? ‘SIR’ ಕಾರ್ಯದ ನಡುವೆ ಸಿಬ್ಬಂದಿ ಕೊರತೆಯ ಆತಂಕ

SIR will be reason for GBA election delay

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣಾ ಕಣ ಸಜ್ಜಾಗುವುದು ಮತ್ತಷ್ಟು ವಿಳಂಬವಾಗುವ ಮುನ್ಸೂಚನೆ ಸಿಕ್ಕಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು, ಚುನಾವಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಆಡಳಿತಾತ್ಮಕ ಅಡಚಣೆಗಳ ನೆಪ:
ಸದ್ಯ ರಾಜ್ಯಾದ್ಯಂತ ಮತದಾರರ ಪಟ್ಟಿ ಅಪ್‌ಡೇಟ್ ಮಾಡುವ ಕೆಲಸ ಆರಂಭ ಆಗುತ್ತದೆ, ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ಮಾನವ ಸಂಪನ್ಮೂಲದ ಕೊರತೆ ಎದುರಾಗಲಿದೆ ಎಂಬುದು ಸರ್ಕಾರದ ವಾದ. ಈ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಕ್ರಿಯೆಯನ್ನು ಮುಂದಕ್ಕೆ ತಳ್ಳುವುದು ಸರ್ಕಾರದ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ: ಮತದಾರರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ಜಿಬಿಎ ವ್ಯಾಪ್ತಿಯ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗ ಮತ್ತು ಸರ್ಕಾರ ನಿರ್ಧರಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳ ಲಭ್ಯತೆ ಇಲ್ಲದಿರುವುದರಿಂದ ಹೆಚ್ಚಿನ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲು ತಯಾರಿ ನಡೆದಿದೆ. ಈ ಹೊಸ ಬೆಳವಣಿಗೆಯಿಂದಾಗಿ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಈಗ ‘SIR’ ಕರಿನೆರಳು ಬೀರಿದಂತಾಗಿದೆ.

ದೇಶದ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ: ಕರ್ನಾಟಕದ 5.5 ಕೋಟಿ ಮತದಾರರ ವಿವರ ಮರುಪರಿಶೀಲನೆ

ಭಾರತೀಯ ಚುನಾವಣಾ ಆಯೋಗವು ದೇಶದ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಮುಂದಾಗಿದ್ದು, 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ’ (SIR Phase-III) ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಸುಮಾರು 36.73 ಕೋಟಿ ಮತದಾರರ ವಿವರಗಳನ್ನು ಮರುಪರಿಶೀಲಿಸುವ ಬೃಹತ್ ಗುರಿಯನ್ನು ಆಯೋಗ ಹಾಕಿಕೊಂಡಿದೆ.

ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು: ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಇವರಿಗೆ ಸಹಕರಿಸಲು ರಾಜಕೀಯ ಪಕ್ಷಗಳ ವತಿಯಿಂದ 3.42 ಲಕ್ಷ ಏಜೆಂಟ್‌ಗಳು ಕೂಡ ಸಾಥ್ ನೀಡಲಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ಒಂದೇ ಹೆಸರಿನ ನಕಲಿ ಗುರುತಿನ ಚೀಟಿಗಳನ್ನು ರದ್ದುಪಡಿಸುವುದು ಮತ್ತು ಹೊಸದಾಗಿ ಮತದಾನದ ಹಕ್ಕು ಪಡೆದ ಯುವಕರನ್ನು ಪಟ್ಟಿಗೆ ಸೇರಿಸುವ ಕೆಲಸ ನಡೆಯಲಿದೆ.

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳ ಅಂಕಿಅಂಶ: ಈ ಅಭಿಯಾನದ ವ್ಯಾಪ್ತಿಗೆ ಬರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಅಂದರೆ 9.86 ಕೋಟಿ ಮತದಾರರನ್ನು ಹೊಂದಿದೆ. ಕರ್ನಾಟಕದಲ್ಲಿ 5.55 ಕೋಟಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದರೆ, ಆಂಧ್ರಪ್ರದೇಶದಲ್ಲಿ 4.16 ಕೋಟಿ ಹಾಗೂ ತೆಲಂಗಾಣದಲ್ಲಿ 3.39 ಕೋಟಿ ಮತದಾರರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.48 ಕೋಟಿ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಹಿಜಾಬ್‌ಗೆ ಕಾಂಗ್ರೆಸ್ ಅಸ್ತು: “ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರದಿಂದ ಷಡ್ಯಂತ್ರ” ಎಂದು ಗುಡುಗಿದ ವಿಜಯೇಂದ್ರ

Leave a Reply

Your email address will not be published. Required fields are marked *