ನವದೆಹಲಿ: ತೈಲ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೆಹಲಿ (Delhi) ಸರ್ಕಾರವು ತನ್ನ ಸಿಬ್ಬಂದಿಗೆ ವಾರದಲ್ಲಿ ಎರಡು ದಿನ ‘ಮನೆಯಿಂದಲೇ ಕೆಲಸ’ (Work From Home) ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.
ಸಕಾರಿ ನೌಕರರಿಗೆ ಹೊಸ ನಿಯಮ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ತಗ್ಗಿಸಲು ಮುಂದಾಗಿರುವ ದೆಹಲಿ ಸರ್ಕಾರ, ತನ್ನ ಎಲ್ಲಾ ಇಲಾಖೆಗಳ ಉದ್ಯೋಗಿಗಳು ವಾರಕ್ಕೆ ಎರಡು ದಿನ ಆಫೀಸ್‌ಗೆ ಬರುವ ಬದಲು ಮನೆಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದೆ. ಈ ಕ್ರಮದಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದ್ದು, ಇಂಧನ ಉಳಿತಾಯದ ಜೊತೆಗೆ ವಾಯು ಮಾಲಿನ್ಯವನ್ನೂ ನಿಯಂತ್ರಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಖಾಸಗಿ ಕಂಪನಿಗಳಿಗೂ ಶೀಘ್ರವೇ ಮಾರ್ಗಸೂಚಿ ಕೇವಲ ಸರ್ಕಾರಿ ಕಚೇರಿಗಳಿಗೆ ಮಾತ್ರವಲ್ಲದೆ, ಖಾಸಗಿ ಸಂಸ್ಥೆಗಳಿಗೂ ಇದೇ ರೀತಿಯ ನಿಯಮ ಅನ್ವಯಿಸುವಂತೆ ಸರ್ಕಾರ ಸದ್ಯದಲ್ಲೇ ಸಲಹೆ ನೀಡಲಿದೆ. ಖಾಸಗಿ ಕಂಪನಿಗಳು ಸಹ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವ ಮೂಲಕ ಸರ್ಕಾರದ ಈ ಮಿತವ್ಯಯದ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಈ ಹೊಸ ಪದ್ಧತಿಯು ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೈಕ್ ಏರಿ ಬಂದು ಬಜೆಟ್ ಉಳಿಸಿದ ಸಿಎಂ; ಮಹಾರಾಷ್ಟ್ರದಲ್ಲಿ ಜಾರಿಗೆ ಬಂತು ಹೈಟೆಕ್ ಮಿತವ್ಯಯ ಮಾರ್ಗಸೂಚಿ!
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅತ್ಯಂತ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಗುರುವಾರ ಮುಂಬೈನ ತಮ್ಮ ಅಧಿಕೃತ ನಿವಾಸ ‘ವರ್ಷಾ’ದಿಂದ ವಿಧಾನ ಭವನಕ್ಕೆ ಸ್ವತಃ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬರುವ ಮೂಲಕ ಅವರು ಮಿತವ್ಯಯದ ಸಂದೇಶ ಸಾರಿದ್ದಾರೆ.
ಬೆಂಗಾವಲು ಪಡೆ ಕಡಿತ
ಮುಖ್ಯಮಂತ್ರಿಗಳ ಜೊತೆಗೆ ಸಚಿವ ಆಶಿಶ್ ಶೆಲಾರ್ ಅವರು ಕೂಡ ಬೈಕ್‌ನಲ್ಲಿ ಹಿಂಬದಿಯ ಸವಾರರಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಹೆಲ್ಮೆಟ್ ಧರಿಸಿ, ಬೆಂಗಾವಲು ಪಡೆಗಳ ಸಂಖ್ಯೆಯನ್ನು ಶೇ. 50ಕ್ಕಿಂತ ಹೆಚ್ಚು ಕಡಿತಗೊಳಿಸಿ ಸರಳವಾಗಿ ಆಗಮಿಸಿದ ಫಡ್ನವಿಸ್, ಸರ್ಕಾರದ ಈ ಬದ್ಧತೆಯನ್ನು ಸಾರ್ವಜನಿಕರಿಗೆ ಸಾಂಕೇತಿಕವಾಗಿ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ವಿದೇಶಿ ವಿನಿಮಯ ಮತ್ತು ಇಂಧನ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಚಿವರು ಮತ್ತು ಅಧಿಕಾರಿಗಳು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು ಎಂದು ತಿಳಿಸಿದರು.
