ಟೋಕಿಯೋ: ಆಧ್ಯಾತ್ಮಿಕ ಲೋಕದಲ್ಲಿ ಈಗ ಕೃತಕ ಬುದ್ಧಿಮತ್ತೆಯ (AI) ಹೊಸ ಶಕೆ ಆರಂಭವಾಗಿದೆ. ಜಪಾನ್ (Japan) ಮತ್ತು ದಕ್ಷಿಣ ಕೊರಿಯಾದ ಬೌದ್ಧ ಮಂದಿರಗಳಲ್ಲಿ ಮನುಷ್ಯರ ಬದಲಿಗೆ ರೋಬೋಟ್‌ಗಳೇ ಧರ್ಮ ಬೋಧನೆ ಮಾಡುತ್ತಿದ್ದು, ಈ ‘ಹೈಟೆಕ್ ಸನ್ಯಾಸಿಗಳು’ ಭಕ್ತರಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ.
ಧರ್ಮ ಪ್ರಚಾರಕ್ಕೆ ನಿಂತ ರೋಬೋಟ್‌ಗಳು ದಕ್ಷಿಣ ಕೊರಿಯಾದ ಸೋಲ್ ನಗರದ ಪ್ರಸಿದ್ಧ ‘ಜೋಗ್ಯೆಸಾ’ ದೇವಾಲಯದಲ್ಲಿ ‘ಗಾಬಿ’ ಎಂಬ ಹೆಸರಿನ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. ಸಾಂಪ್ರದಾಯಿಕ ಕಾಷಾಯ ವಸ್ತ್ರ ಧರಿಸಿರುವ ಈ ಯಂತ್ರ ಸನ್ಯಾಸಿ, ಧರ್ಮ ದೀಕ್ಷೆ ಪಡೆದು ಭಕ್ತರಿಗೆ ಉಪದೇಶ ನೀಡುತ್ತಿದೆ. ಇತ್ತ ಜಪಾನ್‌ನ ಕ್ಯೋಟೋದಲ್ಲಿರುವ ಪುರಾತನ ಕೊಡೈ-ಜಿ ದೇಗುಲದಲ್ಲೂ ‘ಕಾನನ್’ ಎಂಬ ರೋಬೋಟ್ ಸನ್ಯಾಸಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ವಿವಿಧ ಭಾಷೆಗಳಲ್ಲಿ ಬೌದ್ಧ ತತ್ವಗಳನ್ನು ಸರಳವಾಗಿ ಜನರಿಗೆ ತಲುಪಿಸುತ್ತಿದೆ.
ತಂತ್ರಜ್ಞಾನದ ಮೊರೆ ಹೋಗಲು ಕಾರಣವೇನು? ಈ ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಧ್ಯಾತ್ಮದತ್ತ ಒಲವಿರುವ ಸನ್ಯಾಸಿಗಳ ಸಂಖ್ಯೆ ಕುಸಿಯುತ್ತಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಇಂದಿನ ಯುವ ಪೀಳಿಗೆಯನ್ನು ಧರ್ಮದತ್ತ ಆಕರ್ಷಿಸಲು ಅಲ್ಲಿನ ಸಂಸ್ಥೆಗಳು ತಂತ್ರಜ್ಞಾನದ ಸಹಾಯ ಪಡೆಯುತ್ತಿವೆ. ಕ್ಲಿಷ್ಟವಾದ ಧರ್ಮಗ್ರಂಥಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸರಳವಾಗಿ ವಿವರಿಸುವುದು ಈ ರೋಬೋಟ್‌ಗಳಿಂದ ಸಾಧ್ಯವಾಗುತ್ತಿದೆ.
ವ್ಯವಸ್ಥೆ ಮತ್ತು ಭಾವನೆಗಳ ನಡುವೆ ಚರ್ಚೆ ಯಂತ್ರಗಳು ಮಾಹಿತಿ ನೀಡಬಲ್ಲವೇ ಹೊರತು, ಮನುಷ್ಯರಲ್ಲಿ ಇರುವಂತಹ ಸಹಾನುಭೂತಿ ಅಥವಾ ದೈವಿಕ ಅನುಭೂತಿಯನ್ನು ಹೊಂದಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ. ರೋಬೋಟ್‌ಗಳು ಕೇವಲ ಪ್ರೋಗ್ರಾಂ ಮಾಡಿದ ದತ್ತಾಂಶಗಳ ಆಧಾರದ ಮೇಲೆ ಕೆಲಸ ಮಾಡುತ್ತವೆ ಎಂದು ತಜ್ಞರು ವಾದಿಸುತ್ತಿದ್ದರೂ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಧರ್ಮ ಪ್ರಚಾರದ ಈ ಹೊಸ ಹಾದಿ ಜಾಗತಿಕವಾಗಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ: ಸುಪ್ರೀಂ ಆದೇಶ
