Theft: ಸರಣಿಗಳ್ಳತನ ಮಾಡಿದ್ದ ಆರೋಪಿಗಳು ಅಂದರ್‌, ಗೋವಾದಲ್ಲಿ ಎಂಜಾಯ್‌ ಮಾಡುತ್ತಿದ್ದವರು ಪೊಲೀಸರ ಬಲೆಗೆ

Theft gang arrested in belgavi

ಬೆಳಗಾವಿ: ಜಿಲ್ಲೆಯಲ್ಲಿ ಮನೆಗಳ್ಳತನ ಎಸಗಿ ಪೊಲೀಸ್ ಪಡೆಯ ನಿದ್ದೆಗೆಡಿಸಿದ್ದ ಅಂತರರಾಜ್ಯ ಖದೀಮರ ಎರಡು ತಂಡಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಗಲು ಹೊತ್ತಿನಲ್ಲಿ ತರಕಾರಿ ಮಾರುವವರಂತೆ ನಟಿಸಿ ಮನೆಗಳ ಸಂಚು (Theft) ರೂಪಿಸುತ್ತಿದ್ದ ಈ ಕಿಲಾಡಿಗಳು, ದೋಚಿದ ಹಣದಲ್ಲಿ ಗೋವಾದ ಕ್ಯಾಸಿನೋಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಬೀಗ ಹಾಕಿದ್ದ ಮನೆ ಮೇಲೆ ಕಣ್ಣು

ಬಂಧಿತ ಆರೋಪಿಗಳು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದವರಾಗಿದ್ದು, ಬಡಾವಣೆಗಳಲ್ಲಿ ಸಂಚರಿಸುವಾಗ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಈ ಖದೀಮರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದ ಬೆಳಗಾವಿ ಪೊಲೀಸರು, ಎಪಿಎಂಸಿ ಮತ್ತು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 4.71 ಲಕ್ಷ ರೂಪಾಯಿ ಮೌಲ್ಯದ ಆಭರಣ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಶಹಾಪುರ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಮಿಂಟು ವಿಶ್ವಾಸ್ ಎಂಬ ಕುಖ್ಯಾತ ಕಳ್ಳನನ್ನು ಸೆರೆಹಿಡಿಯಲಾಗಿದ್ದು, ಈತನಿಂದ ಬರೋಬ್ಬರಿ 44.86 ಲಕ್ಷ ರೂಪಾಯಿ ಬೆಲೆಬಾಳುವ 290 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಈ ತಂಡಗಳು ಕರ್ನಾಟಕದ ಶಿವಮೊಗ್ಗ, ಕಲಬುರ್ಗಿ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೂ ಕೈಚಳಕ ತೋರಿರುವುದು ದೃಢಪಟ್ಟಿದೆ. ಕಳ್ಳತನ ಮಾಡಿದ ನಗದನ್ನು ಇವರು ಗೋವಾದಲ್ಲಿ ಮೋಜು ಮಸ್ತಿಗಾಗಿ ಬಳಸುತ್ತಿದ್ದರು. ಸದ್ಯ ಆರೋಪಿಗಳು ಜೈಲು ಪಾಲಾಗಿದ್ದಾರೆ.

ಮನೆಗಳ್ಳತನ ತಡೆಯಲು ಎಚ್ಚರಿಕೆ ನೀಡಿರುವ ಜಿಲ್ಲಾ ಪೊಲೀಸರು, ಸಾರ್ವಜನಿಕರು ಪ್ರವಾಸ ಅಥವಾ ಶುಭಕಾರ್ಯಗಳಿಗಾಗಿ ಮನೆಗೆ ಬೀಗ ಹಾಕಿ ಊರಿಗೆ ತೆರಳುವಾಗ ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಂತಹ ಮನೆಗಳ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಿ, ರಾತ್ರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕಲ್ಲಂಗಡಿ ಸೇವಿಸಿ ಮತ್ತೊಂದು ಬಲಿ: ಮುಂಬೈ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ 15 ವರ್ಷದ ಬಾಲಕ ಸಾವು, ಹಣ್ಣು ತಿನ್ನುವ ಮುನ್ನ ಎಚ್ಚರ!

Leave a Reply

Your email address will not be published. Required fields are marked *