ಚೆನ್ನೈನಿಂದ ಅಬುಧಾಬಿಗೆ ಹೊರಡಬೇಕಿದ್ದ ಎತಿಹಾದ್ ಏರ್‌ವೇಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ (Fire Mishap) ಎಂಬ ಸುದ್ದಿಯನ್ನು ವಿಮಾನಯಾನ ಸಂಸ್ಥೆ ಮಂಗಳವಾರ ಅಧಿಕೃತವಾಗಿ ನಿರಾಕರಿಸಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನವು ಟೇಕಾಫ್ ಆಗುವ ಮುನ್ನವೇ ಮರಳಿ ನಿಲ್ದಾಣಕ್ಕೆ ಬಂದಿದೆಯೇ ಹೊರತು, ವಿಮಾನದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸುಮಾರು 280 ಪ್ರಯಾಣಿಕರಿದ್ದ ಈ ವಿಮಾನವು ಹೊರಡಲು ಸಿದ್ಧವಾಗುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಗೇಟ್‌ಗೆ ವಾಪಸ್ ತರಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಏನಿದು ಘಟನೆ?
ಈ ಮೊದಲು ಹೊರಬಂದಿದ್ದ ಕೆಲವು ವರದಿಗಳಲ್ಲಿ ವಿಮಾನದ ಎಡಭಾಗದ ರೆಕ್ಕೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎತಿಹಾದ್ ಸಂಸ್ಥೆಯು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದೆ. ವಿಮಾನ ನಿಲ್ದಾಣದ ಸುರಕ್ಷತಾ ನಿಯಮಗಳ ಅನ್ವಯ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತಾದರೂ, ಅದು ಕೇವಲ ಮುನ್ನೆಚ್ಚರಿಕೆಗಾಗಿ ಕೈಗೊಂಡ ಕ್ರಮವಾಗಿತ್ತು ಎಂದು ಸಂಸ್ಥೆ ತಿಳಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಏರ್‌ಲೈನ್ಸ್ ಪುನರುಚ್ಚರಿಸಿದೆ.
ಈ ತಾಂತ್ರಿಕ ದೋಷದಿಂದಾಗಿ ವಿಮಾನದ ಪ್ರಯಾಣವು ನಿಗದಿತ ಸಮಯಕ್ಕಿಂತ ಸುಮಾರು ಮೂರು ಗಂಟೆಗಳ ಕಾಲ ವಿಳಂಬವಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆ ಯಾಚಿಸಿರುವ ಸಂಸ್ಥೆಯು, ಬಾಧಿತ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೆ, ವಿಮಾನದ ಸಮಯದ ಬಗ್ಗೆ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಲು ಪ್ರಯಾಣಿಕರು ತಮ್ಮ ಸಂಪರ್ಕ ವಿವರಗಳನ್ನು ನವೀಕರಿಸುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ತಾಂತ್ರಿಕ ದೋಷವನ್ನು ಸಕಾಲದಲ್ಲಿ ಪತ್ತೆಹಚ್ಚಿದ್ದರಿಂದ ಯಾವುದೇ ಅಪಾಯವಿಲ್ಲದೆ ವಿಮಾನವು ಸುರಕ್ಷಿತವಾಗಿ ನಿಲ್ದಾಣಕ್ಕೆ ಮರಳಿದೆ.
ಇದನ್ನೂ ಓದಿ: 5 ಜನರ ಬಲಿ ಪಡೆದ ಸೂಪರ್ ಬೈಕ್ ಸ್ಪೀಡ್, ತೆಲಂಗಾಣದಲ್ಲಿ ಭೀಕರ ಘಟನೆ
