TOP NEWS

Election: ಸಿನಿಮಾ ಸ್ಕ್ರೀನ್‌ನಿಂದ ಸಿಎಂ ಕುರ್ಚಿಯತ್ತ ‘ದಳಪತಿ’: ಚಿತ್ರರಂಗಕ್ಕೆ ವಿಜಯ್‌ ಶಾಶ್ವತ ವಿದಾಯ?

after Election winning election vijay may leave film industry

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಚಿತ್ರನಟರು ಅಧಿಕಾರ ಹಿಡಿಯುವುದು ಹೊಸತಲ್ಲದಿದ್ದರೂ, ನಟ ವಿಜಯ್ ಅವರ ಇತ್ತೀಚಿನ ರಾಜಕೀಯ ನಡೆ ಮತ್ತು ಚುನಾವಣಾ (Election) ಟ್ರೆಂಡ್‌ಗಳು ಇಡೀ ದೇಶವನ್ನೇ ಬೆರಗುಗೊಳಿಸಿವೆ. ಎಲ್ಲಾ ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ವಿಜಯ್, ಸದ್ಯ ಮುಖ್ಯಮಂತ್ರಿ ಗದ್ದುಗೆಯ ಸನಿಹಕ್ಕೆ ಬಂದು ನಿಂತಿದ್ದಾರೆ. ಆದರೆ, ಈ ಐತಿಹಾಸಿಕ ಯಶಸ್ಸಿನ ನಡುವೆಯೇ ಅವರು ಚಿತ್ರರಂಗಕ್ಕೆ ಶಾಶ್ವತವಾಗಿ ಗುಡ್‌ಬೈ ಹೇಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಅತೀವ ಆತಂಕ ಮೂಡಿಸಿದೆ.

ಸವಾಲುಗಳೇ ಗೆಲುವಿನ ಮೆಟ್ಟಿಲು ವಿಜಯ್ ಅವರ ರಾಜಕೀಯ ಹಾದಿ ಸುಗಮವಾಗಿರಲಿಲ್ಲ. ಕಳೆದ ಹತ್ತು ವರ್ಷಗಳಿಂದ ಅವರ ಸಿನಿಮಾಗಳು ಸಾಮಾಜಿಕ ಸಮಸ್ಯೆಗಳು ಮತ್ತು ವ್ಯವಸ್ಥೆಯ ವಿಡಂಬನೆಗೆ ಧ್ವನಿಯಾಗಿದ್ದವು. ವಿಶೇಷವಾಗಿ ಅವರ ‘ಜನ ನಾಯಗನ್’ ಚಿತ್ರ ಬಿಡುಗಡೆಯ ವೇಳೆ ಸೆನ್ಸಾರ್ ಮಂಡಳಿ ಮತ್ತು ರಾಜಕೀಯ ಪಕ್ಷಗಳಿಂದ ಎದುರಾದ ಅಡೆತಡೆಗಳೇ ಅವರಿಗೆ ವರವಾದವು. ಅಧಿಕಾರ ವರ್ಗದ ಹತ್ತಿಕ್ಕುವ ಪ್ರಯತ್ನಗಳು ಜನಸಾಮಾನ್ಯರ ಕಣ್ಣಲ್ಲಿ ವಿಜಯ್ ಅವರನ್ನು ಒಬ್ಬ ಧೀಮಂತ ನಾಯಕನಾಗಿ ಬಿಂಬಿಸಿದವು. ಇದೇ ಜನಾಕ್ರೋಶ ಇಂದು ಮತಗಳ ರೂಪದಲ್ಲಿ ಪರಿವರ್ತನೆಯಾದಂತೆ ಕಾಣುತ್ತಿದೆ.

‘ಜನ ನಾಯಗನ್’ ಚಿತ್ರಕ್ಕೆ ಸಿಕ್ಕ ಲಕ್ ಇನ್ನೊಂದೆಡೆ, ವಿಜಯ್ ರಾಜಕೀಯದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ‘ಜನ ನಾಯಗನ್’ ಚಿತ್ರದ ನಿರ್ಮಾಪಕರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಸಿನಿಮಾ ಲೀಕ್ ಆಗಿದ್ದರೂ ಸಹ, ವಿಜಯ್ ಅವರ ಸದ್ಯದ ಕ್ರೇಜ್ ಚಿತ್ರಕ್ಕೆ ಅಭೂತಪೂರ್ವ ಪ್ರಚಾರ ತಂದುಕೊಟ್ಟಿದೆ. ಒಂದು ವೇಳೆ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಲಿವುಡ್‌ಗೆ ನಷ್ಟ, ರಾಜಕೀಯಕ್ಕೆ ಭರವಸೆ ಸಂಪೂರ್ಣವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಿಜಯ್ ಅವರು ನಟನೆಯ ಉತ್ತುಂಗದಲ್ಲಿರುವಾಗಲೇ ಬಣ್ಣದ ಲೋಕ ಬಿಡಲು ನಿರ್ಧರಿಸಿದ್ದಾರೆ. ಇದು ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟವಾದರೂ, ತಮಿಳುನಾಡು ರಾಜಕೀಯಕ್ಕೆ ಒಬ್ಬ ಹೊಸ ಭರವಸೆಯ ನಾಯಕ ಸಿಕ್ಕಂತಾಗಿದೆ. ಸಿನಿಮಾದಿಂದ ದೂರ ಸರಿಯುವ ನಿರ್ಧಾರವು ಜನರ ಮೇಲಿರುವ ಅವರ ಜವಾಬ್ದಾರಿಯನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯಕ್ಕೆ ಅವರ ಕೊನೆಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದ್ದು, ನಟನಾಗಿ ಮತ್ತು ನಾಯಕನಾಗಿ ವಿಜಯ್ ಅವರ ಮುಂದಿನ ಪ್ರತಿ ಹೆಜ್ಜೆಯೂ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ.

ಇದನ್ನೂ ಓದಿ: ತಮಿಳುನಾಡಿನ ಮುಂದಿನ ಸಿಎಂ ವಿಜಯ್‌: ನಟನ ಪರವಾಗಿ ಡಿ.ವಿ. ಸದಾನಂದ ಗೌಡ ಭವಿಷ್ಯ

Leave a Reply

Your email address will not be published. Required fields are marked *