ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅಲ್ಲಿನ ಜನ ನೀಡಿರುವ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ವಿಜಯ್ (Vijay) ಅವರನ್ನು ತಮಿಳುನಾಡಿನ ಜನ ಮುಂದಿನ ಸಿಎಂ ಆಗಿ ನೋಡುತ್ತಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿವಿಎಸ್ ಹೇಳಿದ್ದೇನು?
ತಮಿಳುನಾಡಿನಲ್ಲಿ ದಶಕಗಳಿಂದ ಬೇರೂರಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ಮೀರಿ ಜನತೆ ಈ ಬಾರಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವನ್ನು ಕೈಹಿಡಿದಿದ್ದಾರೆ. ವಿಜಯ್ ಅವರು ಕೇವಲ ತೆರೆಮೇಲಿನ ನಟನಾಗಿ ಉಳಿಯದೆ, ಸಾಮಾಜಿಕ ಸೇವೆಯ ಮೂಲಕ ಜನರ ಮನ ಗೆದ್ದಿದ್ದಾರೆ. ಅವರ ಈ ಅಸಾಧಾರಣ ಯಶಸ್ಸಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಡಿವಿಎಸ್ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವಿನ ಬಗ್ಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರ ದುರಾಡಳಿತಕ್ಕೆ ಜನತೆ ಅಂತಿಮವಾಗಿ ಇತಿಶ್ರೀ ಹಾಡಿದ್ದಾರೆ ಎಂದರು. ಕಮ್ಯುನಿಸ್ಟ್ ಶೈಲಿಯ ಆಡಳಿತ ನಡೆಸುತ್ತಿದ್ದ ಟಿಎಂಸಿ ವಿರುದ್ಧ ಕೇಸರಿ ಪಡೆ ಹಗಲಿರುಳು ಶ್ರಮಿಸಿದೆ. ದೀದಿಯ ಭದ್ರಕೋಟೆಯನ್ನು ಚಿಂದಿ ಮಾಡಿ ಬದಲಾವಣೆಗೆ ನಾಂದಿ ಹಾಡಿದ ಬಂಗಾಳದ ಮತದಾರರಿಗೆ ಡಿವಿಎಸ್ ವಿಶೇಷವಾಗಿ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ: 15 ವರ್ಷಗಳ ಟಿಎಂಸಿ ಆಡಳಿತಕ್ಕೆ ಮುಕ್ತಿ ಹಾಡಿದ ಮತದಾರ!
