ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಕಳೆದ ಒಂದೂವರೆ ದಶಕದಿಂದ ಅಲುಗಾಡದಂತೆ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯನ್ನು (West Bengal) ಬಿಜೆಪಿ ಅಕ್ಷರಶಃ ಧೂಳೀಪಟ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ “ಗಂಗೆ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತಾಳೆ” ಎಂಬ ಮಾತು ಇಂದು ಚುನಾವಣಾ ಫಲಿತಾಂಶದ ಮೂಲಕ ನಿಜವಾಗಿದ್ದು, ಬಂಗಾಳದ ಗದ್ದುಗೆ ಕೇಸರಿಮಯವಾಗಿದೆ.
200ರ ಗಡಿ ದಾಟಿದ ಬಿಜೆಪಿ
ಚುನಾವಣಾ ಫಲಿತಾಂಶದ ಇತ್ತೀಚಿನ ಟ್ರೆಂಡ್ಗಳ ಪ್ರಕಾರ, ಬಿಜೆಪಿ 200ರ ಗಡಿ ತಲುಪುವ ಮೂಲಕ ಐತಿಹಾಸಿಕ ಮುನ್ನಡೆ ಸಾಧಿಸಿದೆ. ಎಕ್ಸಿಟ್ ಪೋಲ್ ಭವಿಷ್ಯಗಳನ್ನು ಸುಳ್ಳು ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಮಮತಾ ಬ್ಯಾನರ್ಜಿ ಅವರಿಗೆ ಮತದಾರರು ಭಾರಿ ಮುಖಭಂಗ ನೀಡಿದ್ದಾರೆ. ಟಿಎಂಸಿ ಈ ಬಾರಿ ಕೇವಲ ಎರಡಂಕಿ ಸ್ಥಾನಗಳಿಗೆ ಸೀಮಿತವಾಗಿದ್ದು, ಉತ್ತರ ಬಂಗಾಳ ಮಾತ್ರವಲ್ಲದೆ ಕೋಲ್ಕತ್ತಾ ನಗರ ಪ್ರದೇಶ ಹಾಗೂ ಮೇದಿನಿಪುರದಂತಹ ಟಿಎಂಸಿಯ ಭದ್ರಕೋಟೆಗಳಲ್ಲೂ ಕೇಸರಿ ಅಲೆ ಅಬ್ಬರಿಸಿದೆ.
ರಾಜ್ಯದಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಗೂಂಡಾ ಸಂಸ್ಕೃತಿಯಿಂದ ಬೇಸತ್ತಿದ್ದ ಬಂಗಾಳದ ಜನತೆ ಈ ಬಾರಿ ಬದಲಾವಣೆಯ ಪರವಾಗಿ ನಿಂತಿದ್ದಾರೆ. ವಿಶೇಷವಾಗಿ ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ಘಟನೆ ಮತ್ತು ಮಹಿಳೆಯರ ಸುರಕ್ಷತೆಯ ವಿಚಾರಗಳು ಚುನಾವಣೆಯ ದಿಕ್ಕನ್ನೇ ಬದಲಿಸಿವೆ. ಮಮತಾ ಬ್ಯಾನರ್ಜಿ ಅವರು ಪ್ರಚಾರದುದ್ದಕ್ಕೂ ಬಳಸಿದ್ದ ‘ಬಂಗಾಳಿ ಅಸ್ಮಿತೆ’ ಮತ್ತು ಭಾವನಾತ್ಮಕ ಅಸ್ತ್ರಗಳು ಈ ಬಾರಿ ಜನರ ಮುಂದೆ ಕೆಲಸ ಮಾಡಿಲ್ಲ. ಇದು ಕೇವಲ ಗೆಲುವಲ್ಲ, ಬದಲಿಗೆ ಭ್ರಷ್ಟಾಚಾರದ ವಿರುದ್ಧ ಜನತೆ ತೋರಿದ ತಿರಸ್ಕಾರ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟೆಲ್ಲಾ ಹಿನ್ನಡೆಯ ನಡುವೆಯೂ ಮಮತಾ ಬ್ಯಾನರ್ಜಿ ಅವರು ತಮ್ಮ ಭದ್ರಕೋಟೆಯಾದ ಭವಾನಿಪುರ ಕ್ಷೇತ್ರದಲ್ಲಿ 17 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಜ್ಯಾದ್ಯಂತ ಸೋಲಿನ ಭೀತಿ ಆವರಿಸಿದ್ದರೂ ದೃತಿಗೆಡದ ಅವರು, ವಿಡಿಯೋ ಸಂದೇಶದ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಹಲವು ಸುತ್ತಿನ ಮತ ಎಣಿಕೆ ಬಾಕಿ ಇದೆ ಎಂದು ಅವರು ಹೇಳಿದ್ದಾರಾದರೂ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ.
