TOP NEWS

Congress: ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ: ಬಿಜೆಪಿ ಬೆಂಬಲಿಸಿದ ಮೂವರು ಪ್ರಭಾವಿ ನಾಯಕರ ಅಮಾನತು

congress suspended more leaders for supporting bjp

ಬಾಗಲಕೋಟೆ: ದಾವಣಗೆರೆಯ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲೂ ಪಕ್ಷವಿರೋಧಿ ಚಟುವಟಿಕೆಗಳ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ (Congress) ಕಠಿಣ ಕ್ರಮ ಕೈಗೊಂಡಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಉಮೇಶ್ ಮೇಟಿ ಅವರ ವಿರುದ್ಧ ಕೆಲಸ ಮಾಡಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಬೆಂಬಲ ನೀಡಿದ ಆರೋಪದ ಮೇಲೆ ಮೂವರು ಪ್ರಮುಖ ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡವರು ಯಾರು?

ಬಿಡಿಸಿಸಿ (BDCC) ಬ್ಯಾಂಕ್‌ನ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಹಾಗೂ ಕಮತಗಿ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ಜಮಖಂಡಿ ಮತ್ತು ಗುರುಲಿಂಗ ಪಾಟೀಲ್ ಅಮಾನತುಗೊಂಡ ನಾಯಕರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಏನಿದು ಘಟನೆ?

ಚುನಾವಣಾ ದೃಷ್ಟಿಯಿಂದ ಕಮತಗಿ ಪಟ್ಟಣವು ಅತ್ಯಂತ ನಿರ್ಣಾಯಕ ಪ್ರದೇಶವಾಗಿದೆ. ಆದರೆ, ಅಲ್ಲಿನ ಪ್ರಭಾವಿ ನಾಯಕರಾಗಿರುವ ಈ ಮೂವರು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುವ ಬದಲು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎನ್. ರಾಂಪುರ ಅವರು ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈ ಮುಖಂಡರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಆದರೆ, ಈ ನಾಯಕರಿಂದ ಯಾವುದೇ ಸಮರ್ಪಕ ಉತ್ತರ ಬಾರದ ಕಾರಣ, ಶಿಸ್ತಿನ ಕ್ರಮದ ಭಾಗವಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹೈಕಮಾಂಡ್ ಇತರ ಮುಖಂಡರಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ.

ಈ ರಾಜಕೀಯ ಬೆಳವಣಿಗೆಯಿಂದಾಗಿ ಬಾಗಲಕೋಟೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಪಕ್ಷದೊಳಗೆ ನಡೆಯುತ್ತಿರುವ ‘ಒಳಪೆಟ್ಟು’ ರಾಜಕಾರಣ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ; ಶಿಕ್ಷೆ ಸಾಕಾಗದು ಎಂದ ಸಂತ್ರಸ್ತ ಆಟೋ ಚಾಲಕ

Leave a Reply

Your email address will not be published. Required fields are marked *