High Court:ಚಾರ್ಜ್‌ಶೀಟ್ ಅಪೂರ್ಣವಾಗಿದ್ದರೂ ಆರೋಪಿಗೆ ಸಿಗಲ್ಲ ‘ಡೀಫಾಲ್ಟ್ ಜಾಮೀನು’ – ಹೈಕೋರ್ಟ್ ಖಡಕ್ ಆದೇಶ

High court says Incomplete charge sheet does not revive right to claim statutory bail

ಬೆಂಗಳೂರು: ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಗಂಭೀರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಯು ನಿಗದಿತ ಅವಧಿಯೊಳಗೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರೆ, ಅದರಲ್ಲಿ ಕೆಲವು ತಾಂತ್ರಿಕ ವರದಿಗಳು ಬಾಕಿ ಇವೆ ಎಂಬ ಕಾರಣಕ್ಕೆ ಆರೋಪಿಗೆ ಶಾಸನಬದ್ಧ ಜಾಮೀನು (Default Bail) ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ.

ಏನಿದು ಘಟನೆ? ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಗೋವಿಂದ್ ಎಂಬಾತ, ತನ್ನ ಸಹೋದ್ಯೋಗಿಯಾಗಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ದುರದೃಷ್ಟವಶಾತ್ ಈ ಘಟನೆಯ ನಂತರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮರಣೋತ್ತರ ಪರೀಕ್ಷೆಯ ವೇಳೆ ಆಕೆ ಗರ್ಭಿಣಿಯಾಗಿದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಬಿಎನ್ಎಸ್, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ಕೆಳಹಂತದ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ತಾಂತ್ರಿಕ ಕಾರಣ ನೀಡಿ ಜಾಮೀನು ಕೋರಿದ್ದ ಆರೋಪಿ: ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಎಫ್‌ಎಸ್‌ಎಲ್ (FSL), ಡಿಎನ್‌ಎ (DNA) ಅಥವಾ ಮೊಬೈಲ್ ಕರೆಗಳ ಮಾಹಿತಿ (CDR) ಲಗತ್ತಿಸಿಲ್ಲ. ಹೀಗಾಗಿ ಇದು ‘ಅಪೂರ್ಣ ಚಾರ್ಜ್‌ಶೀಟ್’ ಆಗಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 193(2) ರ ಪ್ರಕಾರ 60 ದಿನಗಳಲ್ಲಿ ಪೂರ್ಣ ವರದಿ ಸಲ್ಲಿಕೆಯಾಗದ ಕಾರಣ ತಮಗೆ ಶಾಸನಬದ್ಧ ಜಾಮೀನು ನೀಡಬೇಕು ಎಂದು ಅರ್ಜಿದಾರ ವಾದಿಸಿದ್ದನು.

ನ್ಯಾಯಾಲಯದ ಖಡಕ್ ತೀರ್ಪು: ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:

  • ಕ್ರಿಮಿನಲ್ ತನಿಖೆಯು ಆರಂಭದಲ್ಲೇ ನೂರಕ್ಕೆ ನೂರರಷ್ಟು ಪರಿಪೂರ್ಣವಾಗಿರಬೇಕು ಎಂದು ನಿರೀಕ್ಷಿಸುವುದು ಅಸಾಧ್ಯ.
  • ಒಮ್ಮೆ ನಿಗದಿತ 90 ದಿನಗಳ ಕಾಲಮಿತಿಯೊಳಗೆ ಮೂಲಭೂತ ಸಾಕ್ಷ್ಯಗಳೊಂದಿಗೆ ಚಾರ್ಜ್‌ಶೀಟ್ ಸಲ್ಲಿಕೆಯಾದರೆ, ಆರೋಪಿಯ ಶಾಸನಬದ್ಧ ಜಾಮೀನಿನ ಹಕ್ಕು ರದ್ದಾಗುತ್ತದೆ.
  • ವಿಧಿವಿಜ್ಞಾನ ವರದಿಗಳು (FSL) ಬರಲು ಸಮಯ ಬೇಕಾಗಬಹುದು, ಅಷ್ಟು ಮಾತ್ರಕ್ಕೆ ಇಡೀ ತನಿಖಾ ವರದಿಯನ್ನೇ ಅಸಿಂಧು ಎಂದು ಪರಿಗಣಿಸಿ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ.

ಈ ಆದೇಶದ ಮೂಲಕ, ಗಂಭೀರ ಅಪರಾಧ ಎಸಗಿದವರು ಕಾನೂನಿನ ತಾಂತ್ರಿಕ ಅಡೆತಡೆಗಳನ್ನು ಬಳಸಿಕೊಂಡು ಸುಲಭವಾಗಿ ಹೊರಬರುವುದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.

ಇದನ್ನೂ ಓದಿ: ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು

Leave a Reply

Your email address will not be published. Required fields are marked *