Kangana Ranaut: ನನ್ನನ್ನ ಮಾಟಗಾತಿ ಎಂದೆಲ್ಲಾ ಬಿಂಬಿಸಿದ್ರು, ಹಳೆಯ ಘಟನೆ ಹಂಚಿಕೊಂಡ ಕಂಗನಾ

Kangana Ranaut shares how Bollywood titled her as witch

ಮುಂಬೈ: ಬಾಲಿವುಡ್‌ನ ‘ಫೈರ್ ಬ್ರಾಂಡ್’ ಎಂದೇ ಕರೆಯಲ್ಪಡುವ ಕಂಗನಾ ರಣಾವತ್ (Kangana Ranaut), ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸದಾ ವಿವಾದಗಳ ಕೇಂದ್ರಬಿಂದು. ಇದೀಗ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ್ದ ಅತ್ಯಂತ ಕೆಟ್ಟ ಆರೋಪ ಮತ್ತು ಅವಮಾನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದ ಕೆಲವರು ತನ್ನನ್ನು ಹೇಗೆ ‘ಮಾಟಗಾತಿ’ (Witch) ಎಂದು ಕರೆದು ವ್ಯಕ್ತಿತ್ವ ಹರಣ ಮಾಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.

ಪ್ರಿಯಕರನಿಂದಲೇ ಮಾಟ-ಮಂತ್ರದ ಆರೋಪ: ಸುಮಾರು ಹತ್ತು ವರ್ಷಗಳ ಹಿಂದೆ ಕಂಗನಾ ಮತ್ತು ನಟ ಅಧ್ಯಯನ್ ಸುಮನ್ ಪ್ರೀತಿಸುತ್ತಿದ್ದರು. ಆದರೆ 2016ರಲ್ಲಿ ಈ ಸಂಬಂಧ ಮುರಿದುಬಿದ್ದಾಗ ಅಧ್ಯಯನ್ ಸುಮನ್ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಂಗನಾ ಅವರು ನನ್ನ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಾರೆ ಮತ್ತು ಮಾಟ-ಮಂತ್ರದ (Black Magic) ಮೂಲಕ ನನ್ನನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, “ಆಗ ನನಗೆ ಕೇವಲ 26 ವರ್ಷ. ನನ್ನ ಮಾಜಿ ಪ್ರಿಯಕರ ನನ್ನ ವಿರುದ್ಧ ದೂರು ನೀಡಿದಾಗ, ಚಿತ್ರರಂಗದ ಕೆಲವರು ಸೇರಿಕೊಂಡು ಈಕೆ ರಕ್ತ ಕುಡಿಯುವ ಮಾಟಗಾತಿ, ಕಪ್ಪು ಕೋಣೆಯಲ್ಲಿ ಕೂತು ಮಾಟ ಮಾಡುತ್ತಾಳೆ ಎಂದು ಪ್ರಚಾರ ಮಾಡಿದರು. ಅಂತಹ ಕಠಿಣ ಸಮಯದಲ್ಲಿ ನನ್ನನ್ನು ಹೀಯಾಳಿಸಿದವರನ್ನು ನಾನು ಯಾಕೆ ಗೌರವಿಸಬೇಕು?” ಎಂದು ಕಿಡಿಕಾರಿದ್ದಾರೆ.

ನಟಿಯ ಇಮೇಜ್ ಬದಲಿಸಿದ ‘ಕ್ವೀನ್’: ಸತತ ವಿವಾದಗಳು ಮತ್ತು ನೆಗೆಟಿವ್ ಪ್ರಚಾರಗಳ ನಡುವೆಯೂ ಕಂಗನಾ ಅವರನ್ನು ಕೈಹಿಡಿದಿದ್ದು ‘ಕ್ವೀನ್’ ಸಿನಿಮಾ. ಈ ಬಗ್ಗೆ ಮಾತನಾಡಿರುವ ಅವರು, “ಗ್ಲಾಮರ್ ಪಾತ್ರಗಳನ್ನೇ ಮಾಡುತ್ತಿದ್ದ ನನಗೆ ಕುರ್ತಾ ತೊಟ್ಟು ‘ಬೆಹೆಂಜಿ’ ಮಾದರಿಯ ಪಾತ್ರ ನೀಡಿದ ಕ್ವೀನ್ ಸಿನಿಮಾ ಬದುಕು ಬದಲಿಸಿತು. ಶ್ರೀದೇವಿಯವರ ನಂತರ ಹಾಸ್ಯ ಪಾತ್ರಗಳನ್ನು ಅಷ್ಟು ಸೊಗಸಾಗಿ ನಿಭಾಯಿಸಬಲ್ಲ ನಟಿ ನಾನೊಬ್ಬಳೇ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಈ ಚಿತ್ರ ನನ್ನನ್ನು ಚಿತ್ರರಂಗದ ಶ್ರೇಷ್ಠ ನಟಿಯರ ಸಾಲಿಗೆ ಸೇರಿಸಿತು” ಎಂದು ನೆನಪಿಸಿಕೊಂಡಿದ್ದಾರೆ.

ಅಧ್ಯಯನ್ ಸುಮನ್ ಈಗ ಹೇಳುವುದೇನು? ಈ ಹಿಂದೆ ಕಂಗನಾ ತನ್ನನ್ನು ಮಧ್ಯರಾತ್ರಿ ಸ್ಮಶಾನಕ್ಕೆ ಕಳುಹಿಸುತ್ತಿದ್ದರು ಮತ್ತು ತನ್ನ ತಂದೆಯನ್ನೇ ನಿಂದಿಸುತ್ತಿದ್ದರು ಎಂದು ಆರೋಪಿಸಿದ್ದ ಅಧ್ಯಯನ್ ಸುಮನ್, ಈಗ ಆ ಬಗ್ಗೆ ಮಾತನಾಡಲು ಇಷ್ಟಪಡುತ್ತಿಲ್ಲ. “ನಾನು ಆ ಹಳೆಯ ಕಹಿ ಘಟನೆಗಳನ್ನು ಮರೆತು ಜೀವನದಲ್ಲಿ ಸಾಕಷ್ಟು ಮುಂದೆ ಬಂದಿದ್ದೇನೆ. ಆ ವ್ಯಕ್ತಿಯ ಬಗ್ಗೆ ಚರ್ಚೆ ಮಾಡುವುದು ಈಗ ವ್ಯರ್ಥ” ಎಂದು ಅವರು ಹೇಳುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.

ಸದ್ಯ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯೂ ಆಗಿರುವ ಕಂಗನಾ ರಣಾವತ್, ತಮ್ಮದೇ ನಿರ್ದೇಶನದ ‘ಎಮರ್ಜೆನ್ಸಿ’ ಚಿತ್ರದ ವೈಫಲ್ಯದ ಹೊರತಾಗಿಯೂ, ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹಾದಿಯಲ್ಲಿ ಸಾಗುತ್ತಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಹನಿಮೂನ್‌

Leave a Reply

Your email address will not be published. Required fields are marked *