TOP NEWS

Katrina Kaif: ಬಾಲಿವುಡ್‌ನ ‘ಬಾರ್ಬಿ ಗರ್ಲ್’ ಕತ್ರಿನಾ ಕೈಫ್‌ಗೆ 43ರ ಸಂಭ್ರಮ: ವಿಶ್ವದಾದ್ಯಂತ ಹರಿದುಬಂತು ಶುಭಾಶಯಗಳ ಮಹಾಪೂರ!

Bollywoods Barbie Girl Katrina Kaif Turns 43 Ocean of Birthday Wishes Pours In from Across the Globe

ಮುಂಬೈ: ಬಾಲಿವುಡ್‌ನ ಸ್ಟಾರ್ ನಟಿ ಕತ್ರಿನಾ ಕೈಫ್ (Katrina Kaif) ಇಂದು (ಜುಲೈ 16, 2026) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕತ್ರಿನಾ ಅವರ ಯಶಸ್ಸಿನ ಕಿರೀಟಕ್ಕೆ ಹಲವು ಗರಿಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಅವರ ‘ಬಾರ್ಬಿ’ ಗೊಂಬೆಯ ನೆನಪು. ಜಗತ್ತಿನಾದ್ಯಂತ ಹೆಣ್ಣುಮಕ್ಕಳ ನೆಚ್ಚಿನ ಆಟಿಕೆಯಾಗಿರುವ ಬಾರ್ಬಿ ಗೊಂಬೆಯ ರೂಪವನ್ನು ಪಡೆದ ಭಾರತದ ಮೊದಲ ನಟಿ ಕತ್ರಿನಾ ಕೈಫ್ ಎಂಬ ಅಪರೂಪದ ವಿಷಯ ಅನೇಕರಿಗೆ ತಿಳಿದಿಲ್ಲ. ಗ್ಲೋಬಲ್ ಸೆಲೆಬ್ರಿಟಿಗಳ ಮಾದರಿಯಲ್ಲಿ ಗೊಂಬೆಗಳನ್ನು ತಯಾರಿಸುವ ಟ್ರೆಂಡ್ ಭಾರತಕ್ಕೆ ಬರುವ ಮುನ್ನವೇ, ಕತ್ರಿನಾ ಅವರ ಹೋಲಿಕೆಯನ್ನು ಹೊಂದಿರುವ ಅಧಿಕೃತ ಬಾರ್ಬಿ ಗೊಂಬೆಯನ್ನು ಮಾರುಕಟ್ಟೆಗೆ ತರಲಾಗಿತ್ತು.

ಬಾಲಿವುಡ್‌ ಬಾರ್ಬಿಡಾಲ್‌ ಕತ್ರಿನಾ

ಈ ಐತಿಹಾಸಿಕ ಜರ್ನಿ ಆರಂಭವಾಗಿದ್ದು 2009ರ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ. ಬಾರ್ಬಿ ಬ್ರ್ಯಾಂಡ್‌ನ 50ನೇ ವರ್ಷಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಫ್ಯಾಶನ್ ಶೋನಲ್ಲಿ ಕತ್ರಿನಾ ರಾಂಪ್ ವಾಕ್ ಮಾಡಿದ್ದರು. ಪ್ರಖ್ಯಾತ ಡಿಸೈನರ್ ನೀತಾ ಲುಲ್ಲಾ ಅವರ ಪುತ್ರಿ ನಿಶ್ಕಾ ಲುಲ್ಲಾ ವಿನ್ಯಾಸಗೊಳಿಸಿದ್ದ ಆಕರ್ಷಕ ಗುಲಾಬಿ ಬಣ್ಣದ ಉಡುಪಿನಲ್ಲಿ ಕತ್ರಿನಾ ಕಂಗೊಳಿಸಿದ್ದರು. ಸಾಂಪ್ರದಾಯಿಕ ಭಾರತೀಯ ಶೈಲಿ ಮತ್ತು ಪಾಶ್ಚಾತ್ಯ ಗ್ಲಾಮರ್ ಮಿಶ್ರಣವಾಗಿದ್ದ ಈ ವಿನ್ಯಾಸವು ಅತ್ಯುತ್ತಮ ಉಡುಪಾಗಿ ಆಯ್ಕೆಯಾಯಿತು. ಕತ್ರಿನಾ ಅವರ ಆ ಮುದ್ದಾದ ಲುಕ್‌ನಿಂದ ಪ್ರೇರಿತಗೊಂಡು ಬಾರ್ಬಿ ತಯಾರಿಕಾ ಸಂಸ್ಥೆಯಾದ ಮ್ಯಾಟೆಲ್, 2010ರಲ್ಲಿ ಕತ್ರಿನಾ ಹೋಲಿಕೆಯ ಅಧಿಕೃತ ಬಾರ್ಬಿ ಗೊಂಬೆಯನ್ನು ಬಿಡುಗಡೆ ಮಾಡಿತು. ನಟಿಯ ತರಹದ್ದೇ ಕಡುಗಪ್ಪು ಕೂದಲು ಮತ್ತು ಫ್ಯಾಶನ್ ಶೋನಲ್ಲಿ ಅವರು ಧರಿಸಿದ್ದ ಉಡುಪನ್ನೇ ಆ ಗೊಂಬೆಗೆ ಉಡಿಸಲಾಗಿತ್ತು.

ಈ ಮನ್ನಣೆಯ ಮೂಲಕ ಕತ್ರಿನಾ ಕೈಫ್ ಅವರು ಹಾಲಿವುಡ್ ದಿಗ್ಗಜರಾದ ಮರ್ಲಿನ್ ಮನ್ರೋ, ಆಡ್ರಿ ಹೆಪ್ಬರ್ನ್, ಎಲಿಜಬೆತ್ ಟೇಲರ್ ಹಾಗೂ ಪಾಪ್ ಗಾಯಕಿಯರಾದ ಬೆಯೋನ್ಸೆ, ಜೆನ್ನಿಫರ್ ಲೋಪೆಜ್ ಮತ್ತು ಶಕೀರಾ ಅವರನ್ನೊಳಗೊಂಡ ಜಾಗತಿಕ ಗಣ್ಯರ ಸಾಲಿಗೆ ಸೇರ್ಪಡೆಯಾಗಿದ್ದರು. ಅಂದು ಗೊಂಬೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಕತ್ರಿನಾ, ಎಲ್ಲಾ ಹೆಣ್ಣುಮಕ್ಕಳಂತೆ ತಾವೂ ಬಾರ್ಬಿ ಗೊಂಬೆಯೊಂದಿಗೆ ಆಡುತ್ತಾ ಬೆಳೆದಿದ್ದು, ಆಕೆ ತಮಗೆ ಫ್ಯಾಶನ್ ಐಕಾನ್ ಆಗಿದ್ದರು ಎಂದು ಖುಷಿ ಹಂಚಿಕೊಂಡಿದ್ದರು. ಇಂದು ವರ್ಷಗಳು ಉರುಳಿದರೂ ಕತ್ರಿನಾ ಅವರ ಆ ಬಾರ್ಬಿ ಅವತಾರ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.

ನಟಿಗೆ ಶುಭಾಶಯಗಳ ಮಹಾಪೂರ

ಇನ್ನು ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನಟಿಗೆ ಶುಭ ಕೋರುತ್ತಿದ್ದು, ಪತಿ ವಿಕ್ಕಿ ಕೌಶಲ್ ತಮ್ಮ ಪ್ರೀತಿಯ ಪತ್ನಿಗಾಗಿ ಯಾವ ರೀತಿಯ ವಿಶೇಷ ಪೋಸ್ಟ್ ಹಂಚಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಕತ್ರಿನಾ ಕೈಫ್ ಕೊನೆಯದಾಗಿ ಶ್ರೀರಾಮ್ ರಾಘವನ್ ನಿರ್ದೇಶನದ ‘ಮೆರ್ರಿ ಕ್ರಿಸ್ಮಸ್’ (2024) ಚಿತ್ರದಲ್ಲಿ ಬಹುಭಾಷಾ ನಟ ವಿಜಯ್ ಸೇತುಪತಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಪ್ರಭಾಸ್ ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್: ಅಧಿಕೃತವಾಗಿ ಅನೌನ್ಸ್ ಆಯ್ತು ‘ಫೌಜಿ’ ರಿಲೀಸ್ ಡೇಟ್

Leave a Reply

Your email address will not be published. Required fields are marked *