Rajinikanth: ಜೈಲರ್ 2 ಸೆಟ್‌ನಿಂದ ದೃಶ್ಯ ಸೋರಿಕೆ: ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಸನ್ ಪಿಕ್ಚರ್ಸ್ ಗರಂ

rajinikanths jailer 2 film some scenes leaked

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (‌Rajinikanth) ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಚಿತ್ರೀಕರಣದ ಹಂತದಲ್ಲೇ ಪೈರಸಿ ಕಾಟಕ್ಕೆ ಸಿಲುಕಿದೆ. ಚಿತ್ರದ ಪ್ರಮುಖ ದೃಶ್ಯಗಳಿರುವ ವಿಡಿಯೋ ತುಣುಕೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಭದ್ರತಾ ಲೋಪ ಭಾರಿ ನಿರಾಸೆ ಮೂಡಿಸಿದೆ.

ವಾರ್ನಿಂಗ್‌ ಕೊಟ್ಟ ಸನ್‌ ಪಿಕ್ಚರ್ಸ್‌

ಸಿನಿಮಾವನ್ನು ನಿರ್ಮಿಸುತ್ತಿರುವ ಪ್ರತಿಷ್ಠಿತ ‘ಸನ್ ಪಿಕ್ಚರ್ಸ್’ ಸಂಸ್ಥೆಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಡಿಯೋ ಸೋರಿಕೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. “ನಮ್ಮ ಪೈರಸಿ ವಿರೋಧಿ ತಂಡವು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚಿತ್ರದ ದೃಶ್ಯಗಳನ್ನು ಹಂಚಿಕೊಳ್ಳುವ ಅಥವಾ ಪ್ರಚಾರ ಮಾಡುವ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪತ್ತೆಹಚ್ಚಿ ಅವುಗಳನ್ನು ತೆಗೆದುಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ನಿರ್ಮಾಣ ಸಂಸ್ಥೆ ಖಡಕ್ ಆಗಿ ಹೇಳಿದೆ.

2023ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ ‘ಜೈಲರ್’ ಸಿನಿಮಾದ ಮುಂದುವರಿದ ಭಾಗವಾಗಿ ಈ ಚಿತ್ರ ಸಿದ್ಧವಾಗುತ್ತಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ನಿರ್ದೇಶನವಿರುವ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ವಿನಾಯಕನ್ ಸೇರಿದಂತೆ ಮೊದಲ ಭಾಗದಲ್ಲಿದ್ದ ಪ್ರಮುಖ ತಾರಾಗಣವೇ ಮುಂದುವರಿದಿದೆ. ಈ ಸಾಲಿನ ದ್ವಿತೀಯಾರ್ಧದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದ್ದು, ಸದ್ಯ ಸೋರಿಕೆಯಾಗಿರುವ ವಿಡಿಯೋವನ್ನು ಹತ್ತಿಕ್ಕಲು ಚಿತ್ರತಂಡ ಹರಸಾಹಸ ಪಡುತ್ತಿದೆ. ಮಾಧ್ಯಮಗಳು ಮತ್ತು ಅಭಿಮಾನಿಗಳು ಇಂತಹ ವಿಡಿಯೋಗಳನ್ನು ಹಂಚಿಕೊಳ್ಳದಂತೆ ತಂಡ ಮನವಿ ಮಾಡಿದೆ.

ಇದನ್ನೂ ಓದಿ: ನನ್ನನ್ನ ಮಾಟಗಾತಿ ಎಂದೆಲ್ಲಾ ಬಿಂಬಿಸಿದ್ರು, ಹಳೆಯ ಘಟನೆ ಹಂಚಿಕೊಂಡ ಕಂಗನಾ

Leave a Reply

Your email address will not be published. Required fields are marked *