Rashmika Mandanna: ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಹನಿಮೂನ್‌

Inside Vijay Rashmika mandanna Coorg Honeymoon

ಮಡಿಕೇರಿ: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ತವರು ಜಿಲ್ಲೆ ಕೊಡಗಿನಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾದ ನಂತರ ರಶ್ಮಿಕಾ ಅವರು ಕೊಡಗಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮದುವೆಯ ನಂತರ ಕೊಡವ ಸಂಪ್ರದಾಯದಂತೆ ಹಮ್ಮಿಕೊಂಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಸಾಂಪ್ರದಾಯಿಕ ಕೊಡವ ಸೀರೆಯನ್ನು ಉಟ್ಟು ಮಿಂಚುವ ಮೂಲಕ ತಮ್ಮ ಮೂಲ ಸಂಸ್ಕೃತಿಯನ್ನು ಪತಿಗೆ ಹಾಗೂ ಜಗತ್ತಿಗೆ ಪರಿಚಯಿಸಿದ್ದರು.

ಮಾಹಿತಿ ಹಂಚಿಕೊಂಡ ರೆಸಾರ್ಟ್‌

ಈ ತಾರಾ ದಂಪತಿಗಳು ತಮ್ಮ ಕೊಡಗಿನ ಪ್ರವಾಸದ ವೇಳೆ ಸಿದ್ದಾಪುರದ ಬಳಿಯಿರುವ ವಿಶ್ವವಿಖ್ಯಾತ ‘ಇವೊಲ್ವ್ ಬ್ಯಾಕ್’ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರೆಸಾರ್ಟ್ ಆಡಳಿತ ಮಂಡಳಿ, ಭಾರತೀಯ ಚಿತ್ರರಂಗದ ಈ ಖ್ಯಾತ ಜೋಡಿಗೆ ಆತಿಥ್ಯ ನೀಡಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿಕೊಂಡಿದೆ. ಹೆಮ್ಮೆಯ ಕೊಡವತಿ ರಶ್ಮಿಕಾ ಅವರು ತಮ್ಮ ಹುಟ್ಟೂರನ್ನು ಮತ್ತು ಇಲ್ಲಿನ ಸೊಗಡನ್ನು ಪತಿ ವಿಜಯ್ ಅವರಿಗೆ ಬಹಳ ಪ್ರೀತಿಯಿಂದ ತೋರಿಸಿಕೊಟ್ಟಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಕಳೆದ ಈ ಸಮಯ ಅವರ ಪಾಲಿಗೆ ಮರೆಯಲಾಗದ ನೆನಪಾಗಿದೆ ಎಂದು ರೆಸಾರ್ಟ್ ತಿಳಿಸಿದೆ.

ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿರುವ ಈ ರೆಸಾರ್ಟ್ ಸುಮಾರು 300 ಎಕರೆ ಕಾಫಿ ಮತ್ತು ಸಾಂಬಾರ ಪದಾರ್ಥಗಳ ತೋಟದ ನಡುವೆ ಹರಡಿಕೊಂಡಿದೆ. ಇಲ್ಲಿನ ಪ್ರತಿಯೊಂದು ವಿಲ್ಲಾಗಳನ್ನು ಕೊಡವ ಸಂಸ್ಕೃತಿಯ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಇಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ದರವಿದ್ದು, ರೆಸಾರ್ಟ್ ಆವರಣದಲ್ಲಿ ಕಾಫಿ ಕೃಷಿಯ ಇತಿಹಾಸ ಸಾರುವ ಮ್ಯೂಸಿಯಂ ಮತ್ತು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸಾ ಕೇಂದ್ರವೂ ಇರುವುದು ವಿಶೇಷವಾಗಿದೆ.

ಕೊಡಗು ಜಿಲ್ಲೆಯು ತನ್ನ ರಮಣೀಯ ಗುಡ್ಡಗಾಡು ಪ್ರದೇಶಗಳು ಮತ್ತು ವಿಶಿಷ್ಟ ಕೊಡವ ಸಂಸ್ಕೃತಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಉದಯಪುರದ ಮದುವೆಯ ನಂತರ ಹೈದರಾಬಾದ್‌ನಲ್ಲಿ ಚಿತ್ರರಂಗದ ಗೆಳೆಯರಿಗಾಗಿ ಅದ್ಧೂರಿ ಔತಣಕೂಟ ಹಮ್ಮಿಕೊಂಡಿದ್ದ ಈ ಜೋಡಿ, ಇದೀಗ ಮದುವೆಯ ನಂತರದ ಮೊದಲ ಹುಟ್ಟುಹಬ್ಬವನ್ನು ಪ್ರೀತಿಪಾತ್ರರ ಜೊತೆ ಕೊಡಗಿನ ತಂಪಾದ ಪರಿಸರದಲ್ಲಿ ಆಚರಿಸಿಕೊಂಡಿದ್ದಾರೆ. ರಶ್ಮಿಕಾ ಅವರ ಈ ಭೇಟಿ ಮತ್ತು ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ.

ಇದನ್ನೂ ಓದಿ: ಮೊದಲ ಭಾಗದಲ್ಲಿ ಮುಖಾಮುಖಿ ಆಗಲ್ವಂತೆ ರಾಮ-ರಾವಣ, ರಾಮಾಯಣ ಸಿನಿಮಾದ ಹೊಸ ವಿಚಾರ ಬಯಲು

Leave a Reply

Your email address will not be published. Required fields are marked *