Pakistan: ಮಕ್ಕಳ ಜೀವನದ ಜೊತೆ ಆಸ್ಪತ್ರೆ ಸಿಬ್ಬಂದಿ ಚೆಲ್ಲಾಟ, 331 ಮಕ್ಕಳಿಗೆ HIV ಸೋಂಕು

331 children infected HIV in pakistan

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಸಿಬ್ಬಂದಿಯ ಭೀಕರ ನಿರ್ಲಕ್ಷ್ಯ ಮುಂದುವರಿದಿದ್ದು, ನೂರಾರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಅಂಶ ಬಿಬಿಸಿ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲಿನ ಟೌನ್ಸಾ ಪಟ್ಟಣದ ಟಿಎಚ್‌ಕ್ಯೂ (THQ) ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡುವಾಗ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ, ಬಳಸಿದ ಸಿರಿಂಜ್‌ಗಳನ್ನೇ ಮತ್ತೆ ಬಳಸುತ್ತಿರುವುದು ರಹಸ್ಯ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಮಕ್ಕಳಲ್ಲಿ ಹೆಚ್‌ಐವಿ (HIV) ಪ್ರಕರಣಗಳು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಆಸ್ಪತ್ರೆಯಲ್ಲಿ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ ಎಂಬುದು ಈ ವರದಿಯಿಂದ ಸಾಬೀತಾಗಿದೆ.

32 ಗಂಟೆಗಳ ರಹಸ್ಯ ಕಾರ್ಯಾಚರಣೆ

ಬಿಬಿಸಿ ಐ (BBC Eye) ತಂಡವು 2025ರ ಕೊನೆಯಲ್ಲಿ ಸುಮಾರು 32 ಗಂಟೆಗಳ ಕಾಲ ನಡೆಸಿದ ರಹಸ್ಯ ಚಿತ್ರೀಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಅಮಾನವೀಯ ನಡೆಗಳು ಒಂದೊಂದಾಗಿ ಬಯಲಾಗಿವೆ. ಸಿಬ್ಬಂದಿ ಕನಿಷ್ಠ ಹತ್ತು ಬಾರಿ ಒಂದೇ ಸಿರಿಂಜ್ ಅನ್ನು ಬಳಸಿದ್ದಲ್ಲದೆ, ಒಂದು ಮಗುವಿಗೆ ನೀಡಿದ ಔಷಧಿಯ ಬಾಟಲಿಯನ್ನೇ ಇತರ ಮಕ್ಕಳಿಗೂ ಬಳಸಿದ್ದಾರೆ. ಅಷ್ಟೇ ಅಲ್ಲದೆ, ಡಜನ್ಗಟ್ಟಲೆ ಬಾರಿ ಇಂಜೆಕ್ಷನ್ ನೀಡುವಾಗ ವೈದ್ಯಕೀಯ ಕೈಗವಸುಗಳನ್ನು (Sterile Gloves) ಧರಿಸದೆ ಇರುವುದು ಕಂಡುಬಂದಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ಒಮ್ಮೆ ಬಳಸಿ ಬಿಸಾಡಿದ ಸಿರಿಂಜ್‌ಗಳನ್ನು ಮತ್ತೆ ಎತ್ತಿಕೊಂಡು ಅವುಗಳನ್ನು ಮುಂದಿನ ಚಿಕಿತ್ಸೆಗೆ ಸಿದ್ಧಪಡಿಸುತ್ತಿರುವ ದೃಶ್ಯಗಳು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವೈದ್ಯಕೀಯ ತಜ್ಞರು ಈ ವಿಡಿಯೋಗಳನ್ನು ಪರಿಶೀಲಿಸಿದ್ದು, ಕೇವಲ ಸೂಜಿಯನ್ನು (Needle) ಬದಲಾಯಿಸಿದ ಮಾತ್ರಕ್ಕೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಸಿರಿಂಜ್‌ನ ಹಿಂಭಾಗದ ಪ್ಲಾಸ್ಟಿಕ್ ಭಾಗದಲ್ಲಿ ವೈರಸ್ ಉಳಿದುಕೊಂಡಿರುತ್ತದೆ, ಹಾಗಾಗಿ ಅದನ್ನು ಮತ್ತೊಂದು ಮಗುವಿಗೆ ಬಳಸಿದಾಗ ಸೋಂಕು ಸುಲಭವಾಗಿ ಹರಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆಗಳ ಭರವಸೆಗಳ ಹೊರತಾಗಿಯೂ ಸರ್ಕಾರಿ ಆಸ್ಪತ್ರೆಯ ಈ ವ್ಯವಸ್ಥಿತ ವೈಫಲ್ಯವು ಈಗ ನೂರಾರು ಮಕ್ಕಳ ಬದುಕನ್ನು ಅಪಾಯಕ್ಕೆ ದೂಡಿದೆ.

ಇದನ್ನೂ ಓದಿ: ಜಾತಿ ಗಣತಿ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ: ಅರ್ಜಿದಾರರ ಭಾಷೆಗೆ ಸಿಜೆಐ ಗರಂ

Leave a Reply

Your email address will not be published. Required fields are marked *