ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ (Big News) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ.
ವಿಧೇಯಕ ಮಂಡಿಸಿದ ಮಧುಬಂಗಾರಪ್ಪ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ, ವಿಧೇಯಕವನ್ನು ಪರ್ಯಾಲೋಚನೆಗಾಗಿ ಮಂಡಿಸಿ ವಿವರಣೆ ನೀಡಿದ ಬಳಿಕ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆ ನೀಡಿದರು. ಬಳಿಕ, ಸಭಾಧ್ಯಕ್ಷ ಯು.ಟಿ.ಖಾದರ್ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.
ಕೌನ್ಸಿಲಿಂಗ್ ಮೂಲಕ ಶಿಕ್ಷಕರ ವರ್ಗಾವಣೆ
ಇದಕ್ಕೂ ಮುನ್ನ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕೌನ್ಸಿಲಿಂಗ್ ಮೂಲಕ ಶಿಕ್ಷಕರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಮೊದಲಿಗೆ ಕರ್ನಾಟಕ ಪಬ್ಲಿಕ್ ಶಾಲೆ, ಆದರ್ಶ ವಿದ್ಯಾಲಯ ಮತ್ತು ಪಿಎಂಶ್ರಿ ಶಾಲೆಗಳಿಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಶಾಲೆಗಳ ಹುದ್ದೆ ಭರ್ತಿ ಮಾಡಿದ ಬಳಿಕ ಉಳಿದ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶಾಲೆ ಅಥವಾ ಕಾಲೇಜುಗಳಲ್ಲಿನ ಸ್ಥಾನಿಕ ವೃಂದದಲ್ಲಿ ಸಲ್ಲಿಸಿರುವ ಶಿಕ್ಷಕರ ಕನಿಷ್ಟ ಸೇವಾವಧಿಯು ೧೨ ವರ್ಷಗಳಾಗಿರಬೇಕು. ಕಲ್ಯಾಣ ಕರ್ನಾಟಕ ಕೋಟಾದಡಿಯಲ್ಲಿ ನೇಮಕಗೊಂಡ ಶಿಕ್ಷಕರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಟ ೧೦ ವರ್ಷ ಸೇವೆ ಸಲ್ಲಿಸಬೇಕು. ಆ ನಂತರ ವರ್ಗಾವಣೆಗೆ ಅವಕಾಶ ದೊರೆಯಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.
