ನವದೆಹಲಿ: ಸದ್ಯ ದೇಶದಲ್ಲಿ LPG ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಮನೆಗಳಿಗೆ ನಿರಂತರ ಗ್ಯಾಸ್ ಪೂರೈಕೆಯನ್ನು ಖಚಿತಪಡಿಸಲಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ , LPG ಸರಬರಾಜುಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ದೆಹಲಿಯಲ್ಲಿಂದು ಹೇಳಿದರು.
ವದಂತಿಗಳನ್ನು ನಂಬಬೇಡಿ
ಸುದ್ದಿಗೋಷ್ಠಿಯಲ್ಲಿ ಅವರು, LPG ಗೆ ಸಂಬಂಧಿಸಿದಂತೆ ವದಂತಿಗಳನ್ನು ನಂಬಬೇಡಿ ಎಂದು , ಜನರಲ್ಲಿ ಮನವಿ ಮಾಡಿಕೊಂಡರು. ಭಾರತ ಸರ್ಕಾರವು ನಿಯಮಿತ ಕೋಟಾಕ್ಕಿಂತ , ಹೆಚ್ಚಾಗಿ 48 ಸಾವಿರ ಕಿಲೋ ಲೀಟರ್ ಹೆಚ್ಚುವರಿ ಹಂಚಿಕೆಯನ್ನು ಮಂಜೂರು ಮಾಡಿದೆ. ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಲು, ಕೋಲ್ ಇಂಡಿಯಾ ಈಗಾಗಲೇ, ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲು ಲಭ್ಯವಾಗುವಂತೆ ನೋಡಿಕೊಳ್ಳಲು ಆದೇಶಗಳನ್ನು ಹೊರಡಿಸಿದೆ ಎಂದು ಹೇಳಿದರು.
ಇದೇ ವೇಳೆ ಕೆಲವು ಕಡೆಗಳಲ್ಲಿ ಕಾಳಸಂತೆಯಲ್ಲಿ, ಗ್ಯಾಸ್ಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದೆ. ಆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿ ಅವರು, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ವಾಣಿಜ್ಯ ಸಿಲಿಂಡರ್ಗಳ ವಿತರಣೆಯನ್ನು ಸುಲಭಗೊಳಿಸಲು , ರಾಜ್ಯ ಸರ್ಕಾರಗಳ ವಿಲೇವಾರಿಯಲ್ಲಿ ಇರಿಸಲಾಗಿದೆ. ಆದ್ಯತೆಯ ಮಾನದಂಡಗಳನ್ನು ನಿರ್ಧರಿಸಲು ಮತ್ತು ಈ ವಾಣಿಜ್ಯ ಸಿಲಿಂಡರ್ಗಳು , ಉದ್ದೇಶಿತ ಗ್ರಾಹಕರನ್ನು ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳಲು , ನಾವು ರಾಜ್ಯ ಸರ್ಕಾರಗಳನ್ನು ವಿನಂತಿಸುತ್ತಿದ್ದೇವೆ ಎಂದು ಅವರು ಹೇಳಿದರು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ನಡುವೆಯೂ, ಇಂಧನ ಮತ್ತು ಸರಕುಗಳ, ಅಡೆತಡೆಯಿಲ್ಲದ ಸಾಗಣೆಯ ಮಹತ್ವವನ್ನು ಭಾರತ ಎತ್ತಿ ತೋರಿಸಿದೆ ಎಂದರು.
ಇರಾನ್ ಅಧ್ಯಕ್ಷರ ಜೊತೆ ಮೋದಿ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ, ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ , ಪರಿಹರಿಸಬೇಕು ಎಂಬ ನಿಲುವನ್ನು ಭಾರತ ಹೊಂದಿದ್ದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ವಿದೇಶಾಂಗ ಸಚಿವಾಲಯದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿ , ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇಲ್ಲಿಯವರೆಗೆ 900 ಫೋನ್ ಕರೆಗಳು ಮತ್ತು 200 ಇಮೇಲ್ಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 19 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ
