ಅಸ್ಸಾಂ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಗುವಾಹಟಿಯಲ್ಲಿ , ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ 18 ಸಾವಿರದ 640 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
19 ಸಾವಿರದ 500 ಕೋಟಿ ಯೋಜನೆ
ಇದೇ ವೇಳೆ ಗುವಾಹಟಿಯಲ್ಲಿ, 19 ಸಾವಿರದ 500 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 150 ಮೆಗಾ ವ್ಯಾಟ್ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದರು. ಬಳಿಕ, ಚಹಾ ತೋಟದ ಕಾರ್ಮಿಕರಿಗೆ ಜಮೀನು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ, NDA ನೇತೃತ್ವದ ಸರ್ಕಾರ ಸದಾ ರೈತರ ಪರವಾಗಿದೆ. ಇದಾಗಲೇ ಕೇಂದ್ರ ಸರ್ಕಾರವು , ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಿದೆ. ಅಸ್ಸಾಂ ಒಂದರಲ್ಲಿಯೇ 19 ಲಕ್ಷಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ರೈತರಿಗೆ ತೊಂದರೆ ಆಗದಂತೆ ಸರ್ಕಾರದ ಕ್ರಮ
ರೈತರಿಗೆ ತೊಂದರೆ ಆಗದಂತೆ ಸದಾ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಕರೋನಾ ಸಂಕಟದ ಸಮಯವಾಗಲಿ ಅಥವಾ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಾಗಲೀ , ಕೃಷಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು. ಪಿಎಂ ಕುಸುಮ್ ಯೋಜನೆಯಿಂದ , ಸಾಕಷ್ಟು ರೈತರು ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ರೈತರಿಗೆ ಸೌರ ಪಂಪ್‌ಗಳನ್ನು ಅಳವಡಿಸಲು, ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು , ಮತ್ತು ಪಂಪ್‌ಗಳನ್ನು ಸೌರಶಕ್ತಿ ಆಧಾರಿತವನ್ನಾಗಿಸಲು , ಶೇಕಡಾ 60 ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದರು.
ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ , ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ದೇಶವನ್ನು ಆತ್ಮನಿರ್ಭರ ಮಾಡುವ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖವಾಗಿದೆ ಎಂದ ಪ್ರಧಾನಿ, ಕಾಂಗ್ರೆಸ್ ಸರ್ಕಾರ , ಇಂಥ ಯುದ್ಧದ ಭೀತಿಯ ನಡುವೆಯೂ ಇಲ್ಲಸಲ್ಲದ ವದಂತಿಗಳನ್ನು ಹರಡುವ ಮೂಲಕ ಭೀತಿ ಹೆಚ್ಚಿಸುತ್ತಿದೆ ಎಂದರು. ಇದಕ್ಕೂ ಮುನ್ನ ಅಸ್ಸಾಂನಲ್ಲಿ ಪ್ರಧಾನಿ, ಕೊಕ್ರಜಾರ್‌ನಲ್ಲಿ 4 ಸಾವಿರದ 570 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಅಸ್ಸಾಂ ಮತ್ತು ಈಶಾನ್ಯ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ , ಮೂರು ಹೊಸ ರೈಲು ಸೇವೆಗಳಿಗೆ ಇದೇ ವೇಳೆ ಪ್ರಧಾನಿ ಚಾಲನೆ ನೀಡಿದರು. ಇದು, ಈಶಾನ್ಯ ಮತ್ತು ದಕ್ಷಿಣ ಭಾರತದ ನಡುವೆ ನೇರ ರೈಲು ಸಂಪರ್ಕವನ್ನು ಕಲ್ಪಿಸಲಿದೆ.
ಇದನ್ನೂ ಓದಿ: ಅಡುಗೆ ಅನಿಲ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ್ ಬೊಮ್ಮಾಯಿ
