ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜನಿಸಿದ್ದ ನಾಲ್ಕು ಚಿರತೆ ಮರಿಗಳು ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ಭಾರತದ ‘ಪ್ರಾಜೆಕ್ಟ್ ಚೀತಾ’ (Cheetah Cubs) ಯೋಜನೆಗೆ ಭಾರಿ ಆಘಾತ ಉಂಟಾಗಿದೆ. ಭಾರತದಲ್ಲೇ ಜನಿಸಿದ್ದ ಕೆಜಿಪಿ-12 ಹೆಸರಿನ ಹೆಣ್ಣು ಚಿರತೆಗೆ ಕಳೆದ ಏಪ್ರಿಲ್ 11 ರಂದು ಈ ನಾಲ್ಕು ಮರಿಗಳು ಜನಿಸಿದ್ದವು. ಇಂದು ಬೆಳಿಗ್ಗೆ ಸುಮಾರು 6:30ರ ಸುಮಾರಿಗೆ ಅರಣ್ಯ ಇಲಾಖೆಯ ಕಣ್ಗಾವಲು ತಂಡವು ತಪಾಸಣೆ ನಡೆಸುತ್ತಿದ್ದಾಗ ಮರಿಗಳ ದೇಹಗಳು ಪತ್ತೆಯಾಗಿವೆ.
ಚಿರತೆಗಳ ಮರಣೋತ್ತರ ಪರೀಕ್ಷೆ
ಪತ್ತೆಯಾದ ಮರಿಗಳ ದೇಹಗಳು ಅರ್ಧದಷ್ಟು ತಿನ್ನಲ್ಪಟ್ಟ ಸ್ಥಿತಿಯಲ್ಲಿದ್ದು, ಯಾವುದೋ ಕಾಡು ಪ್ರಾಣಿ ಇವುಗಳನ್ನು ಬೇಟೆಯಾಡಿರುವ ಸಾಧ್ಯತೆಯಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 11ರಂದು ಈ ಮರಿಗಳು ಕೊನೆಯ ಬಾರಿಗೆ ಜೀವಂತವಾಗಿ ಕಂಡುಬಂದಿದ್ದವು. ಸದ್ಯಕ್ಕೆ ತಾಯಿ ಚಿರತೆ ಆರೋಗ್ಯವಾಗಿದ್ದು, ಮರಿಗಳ ಸಾವಿಗೆ ನಿಖರವಾದ ಕಾರಣವೇನೆಂದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ತಿಳಿದುಬರಲಿದೆ. ಈ ಘಟನೆಯು ಉದ್ಯಾನವನದ ಸಿಬ್ಬಂದಿ ಮತ್ತು ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿಶೇಷವೆಂದರೆ, ಕೆಜಿಪಿ-12 ಭಾರತದಲ್ಲಿ ಜನಿಸಿ ತಾಯಿಯಾದ ಎರಡನೇ ಹೆಣ್ಣು ಚಿರತೆಯಾಗಿತ್ತು. ಇದಕ್ಕೂ ಮುನ್ನ ಮುಖಿ ಹೆಸರಿನ ಚಿರತೆ ಭಾರತದಲ್ಲಿ ಜನಿಸಿ ಮರಿಗಳಿಗೆ ಜನ್ಮ ನೀಡಿದ ಮೊದಲ ಚಿರತೆ ಎನಿಸಿಕೊಂಡಿತ್ತು. ಕುನೋದಲ್ಲಿ ಈವರೆಗೆ ಮರಿಗಳಿಗೆ ಜನ್ಮ ನೀಡಿದ ಇತರ ಐದು ಹೆಣ್ಣು ಚಿರತೆಗಳು ನಮೀಬಿಯಾ ಅಥವಾ ದಕ್ಷಿಣ ಆಫ್ರಿಕಾದಿಂದ ಬಂದವುಗಳಾಗಿದ್ದವು. ಈ ನಾಲ್ಕು ಮರಿಗಳ ಸಾವಿನ ನಂತರ ಕುನೋ ಉದ್ಯಾನವನದಲ್ಲಿ ಚಿರತೆಗಳ ಒಟ್ಟು ಸಂಖ್ಯೆ 50ಕ್ಕೆ ಇಳಿಕೆಯಾಗಿದೆ. ಇದರಲ್ಲಿ ಭಾರತದಲ್ಲೇ ಜನಿಸಿದ 33 ಮರಿಗಳು ಸೇರಿವೆ. ಉಳಿದಂತೆ ಮೂರು ಚಿರತೆಗಳನ್ನು ಒಂದು ವರ್ಷದ ಹಿಂದೆಯೇ ಮಂದಸೌರ್ ಜಿಲ್ಲೆಯ ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: NTA ವಿರುದ್ಧ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲು ಏರಬಹುದಾ?
