ಪಶ್ಚಿಮ ಬಂಗಾಳದಲ್ಲಿ (West Bengal) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾತ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಕೊಲೆಯು ರಾಜ್ಯದಲ್ಲಿ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಚಂದ್ರನಾಥ್ ಅವರ ನಿಧನಕ್ಕೆ ಸುವೇಂದು ಅಧಿಕಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇದು ವ್ಯವಸ್ಥಿತವಾಗಿ ನಡೆದ ಹತ್ಯೆ ಎಂದು ಆರೋಪಿಸಿದ್ದಾರೆ.
ಮಮತಾ ಆಡಳಿತಕ್ಕೆ ಅಂತ್ಯ
ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದ ನಂತರ ಅಶಾಂತಿ ನಿರ್ಮಾಣವಾಗಿದೆ. ಸೋಮವಾರದಿಂದ ಈವರೆಗೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಮೂವರು ಪ್ರಾಣ ಕಳೆದುಕೊಂಡಿದ್ದು, 400ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ಗುಂಡಿನ ಸಿಪ್ಪೆಗಳು ಪತ್ತೆಯಾಗಿದ್ದು, ಕೃತ್ಯಕ್ಕೆ ಬಳಸಲಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅದರ ನಂಬರ್ ಪ್ಲೇಟ್ ತಪ್ಪಾಗಿರುವುದು ಪತ್ತೆಯಾಗಿದೆ. ಟಿಎಂಸಿ ಪಕ್ಷವು ಈ ಕೊಲೆಯನ್ನು ಖಂಡಿಸಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಬಿರ್ಭುಮ್, ಕೋಲ್ಕತ್ತಾ ಮತ್ತು ಹೌರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಗ್ನಿಸ್ಪರ್ಶ ಮತ್ತು ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಚೇರಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿದರೆ, ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಬಿಜೆಪಿ ದೂರಿದೆ. ಅಷ್ಟೇ ಅಲ್ಲದೆ, ಕೋಲ್ಕತ್ತಾದ ಮಾರುಕಟ್ಟೆಯೊಂದರಲ್ಲಿ ಬುಲ್ಡೋಜರ್ ಬಳಸಿ ಮಾಂಸದ ಅಂಗಡಿಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸೋಮವಾರ ಪ್ರಮಾಣ ವಚನ ಸಾಧ್ಯತೆ
ಚುನಾವಣಾ ಆಯೋಗವು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ತೀವ್ರ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಶನಿವಾರ ರಾಜ್ಯದ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಸುವೇಂದು ಅಧಿಕಾರಿ ಅವರೇ ಈ ಹುದ್ದೆಗೇರುವ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಸದ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಸರಣಿ ಘಟನೆಗಳು ಬಂಗಾಳದ ಜನತೆಯನ್ನು ಭೀತಿಯಲ್ಲಿರಿಸಿವೆ.
ಇದನ್ನೂ ಓದಿ: ಜನಾದೇಶ ಗೌರವಿಸಿ, ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿ: ಕಮಲ್ ಹಾಸನ್ ಆಗ್ರಹ
