ಪಾಕಿಸ್ತಾನ: ಇಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಹಗಲು ಹೊತ್ತಿನಲ್ಲೇ ವ್ಯಕ್ತಿಯೊಬ್ಬನ ಮೇಲೆ ನಡೆಸಲಾದ ಭೀಕರ ಗುಂಡಿನ ದಾಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ (Pakistan) ಆಗುತ್ತಿದ್ದು, ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಹಿರಿಯ ಕಮಾಂಡರ್ ಹಾಗೂ ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್ಐ (ISI) ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಇಮ್ರಾನ್ ಎಂಬಾತನನ್ನು ಈ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಪ್ರತಿಪಾದಿಸಲಾಗುತ್ತಿದೆ. ಆದರೆ, ಈ ವಿಡಿಯೋದ ಸತ್ಯಾಸತ್ಯತೆ, ಕೊಲೆಯಾದ ವ್ಯಕ್ತಿಯ ಗುರುತು ಹಾಗೂ ಘಟನೆ ನಡೆದ ಸ್ಥಳದ ಕುರಿತು ಇದುವರೆಗೂ ಯಾವುದೇ ಅಧಿಕೃತ ಅಥವಾ ಸ್ವತಂತ್ರ ದೃಢೀಕರಣ ಸಿಕ್ಕಿಲ್ಲ.
ಏನಿದೆ ವೈರಲ್ ವಿಡಿಯೋದಲ್ಲಿ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳ ಪ್ರಕಾರ, ಬೈಕ್ ಸವಾರನೊಬ್ಬ ಕಟ್ಟಡದ ಗೇಟ್ನಿಂದ ಹೊರಬರುತ್ತಿದ್ದಂತೆ, ಬಿಳಿ ಬಟ್ಟೆ ಧರಿಸಿದ್ದ ಬಂದೂಕುಧಾರಿಯೊಬ್ಬ ಆತನ ಬಳಿಗೆ ಬಂದು ಏಕಾಏಕಿ ಗುಂಡಿನ ಮಳೆ ಹರಿಸುತ್ತಾನೆ. ಭಯದಿಂದ ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯ ತಪ್ಪಿ ರಸ್ತೆಯ ಮೇಲೆ ಬೀಳುತ್ತಾನೆ. ಈ ವೇಳೆ ದಾಳಿಕೋರ ಆತನ ಬಳಿಗೆ ಧಾವಿಸಿ ನಿರಂತರವಾಗಿ ಗುಂಡು ಹಾರಿಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಚೀಲದಿಂದ ಮತ್ತೊಂದು ಪಿಸ್ತೂಲ್ ತೆಗೆದು ಆತನ ಮೇಲೆ ಮತ್ತೆ ಹಲವು ರೌಂಡ್ ಗುಂಡು ಹಾರಿಸುತ್ತಾನೆ. ಕೊನೆಗೆ ದಾಳಿಕೋರ ತನ್ನ ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಿಸಿದಂತೆ ಮಾಡಿ ಸ್ಥಳದಿಂದ ಕಾಲ್ಕಿಳುತ್ತಾನೆ. ವಿಡಿಯೋದ ಕೊನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿ ಯಾವುದೇ ಚಲನವಲನವಿಲ್ಲದೆ ಬಿದ್ದಿರುವುದು ಕಾಣಿಸುತ್ತದೆ.
🚨 Top Lashkar Commander Imran killed by unknown gunmen in broad daylight in Pakistan: reports https://t.co/K84DAOqe34
— News Matrix (@NewsMatrixIND) October 13, 2026
ಈ ವಿಡಿಯೋ ತುಣುಕಿನಲ್ಲಿ 2026ರ ಅಕ್ಟೋಬರ್ 13ರ ಬೆಳಿಗ್ಗೆ 11:54ರ ಸಮಯದ ಟೈಮ್ಸ್ಟ್ಯಾಂಪ್ ಕಂಡುಬರುತ್ತಿದೆ. ಆದರೆ ಈ ಟೈಮ್ಸ್ಟ್ಯಾಂಪ್ ಒಂದನ್ನೇ ಆಧಾರವಾಗಿಟ್ಟುಕೊಂಡು ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಹಲವು ಖಾತೆಗಳು, ಇದು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಹಿರಿಯ ಕಾರ್ಯಾಚರಣೆಗಾರ ಇಮ್ರಾನ್ನನ್ನು ಗುರಿಯಾಗಿಸಿಕೊಂಡು ನಡೆಸಿದ ಟಾರ್ಗೆಟೆಡ್ ಕಿಲ್ಲಿಂಗ್ ಎಂದು ಹೇಳಿಕೊಳ್ಳುತ್ತಿವೆ. ಅಂದಹಾಗೆ, ಲಷ್ಕರ್-ಎ-ತೊಯ್ಬಾ ಸಂಸ್ಥೆಯನ್ನು ಭಾರತ ಸೇರಿದಂತೆ ಹಲವು ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ನಿಷೇಧಿಸಿವೆ.
ಪಾಕಿಸ್ತಾನದಿಂದ ಬರಬೇಕಿದೆ ಅಧಿಕೃತ ಮಾಹಿತಿ
ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದ್ದರೂ, ಲಭ್ಯವಿರುವ ಮಾಹಿತಿಗಳು ಇದನ್ನು ಸ್ವತಂತ್ರವಾಗಿ ದೃಢೀಕರಿಸುತ್ತಿಲ್ಲ. ಇನ್ನು ಈ ವರದಿಯಾದ ಹತ್ಯೆಗೆ ಸಂಬಂಧಿಸಿದಂತೆ ಅಥವಾ ಕೊಲೆಯಾದ ವ್ಯಕ್ತಿಯ ಗುರುತನ್ನು ಖಚಿತಪಡಿಸಿ ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಅಲ್ಲಿನ ಯಾವುದೇ ಅಧಿಕೃತ ಸಂಸ್ಥೆಗಳಾಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ಈ ಕುರಿತು ತನಿಖೆ ಪ್ರಾರಂಭಿಸಿದ್ದಾರೆಯೇ, ಯಾರನ್ನಾದರೂ ಬಂಧಿಸಲಾಗಿದೆಯೇ ಅಥವಾ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತಿಸಲಾಗಿದೆಯೇ ಎಂಬುದರ ಬಗ್ಗೆಯೂ ಯಾವುದೇ ದೃಢಪಟ್ಟ ಮಾಹಿತಿಯಿಲ್ಲ.
ಒಟ್ಟಿನಲ್ಲಿ, ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವವರೆಗೆ ಮತ್ತು ಪಾಕಿಸ್ತಾನದ ಅಧಿಕಾರಿಗಳು ಅಥವಾ ವಿಶ್ವಸನೀಯ ಸ್ವತಂತ್ರ ಮೂಲಗಳು ಹತ್ಯೆಯಾದ ವ್ಯಕ್ತಿಯ ಗುರುತನ್ನು ಖಚಿತಪಡಿಸುವವರೆಗೆ, ಲಷ್ಕರ್ ಕಮಾಂಡರ್ ಇಮ್ರಾನ್ ಕೊಲೆಯಾಗಿದ್ದಾನೆ ಎಂಬ ಸುದ್ದಿ ಕೇವಲ ದೃಢಪಡದ ಆರೋಪವಾಗಿಯೇ ಉಳಿದಿದೆ.
ಇದನ್ನೂ ಓದಿ: ನನ್ನ ಕಿವಿಯ ಶಕ್ತಿ ಹೋಯಿತು!’: ದೆಹಲಿ ಪೊಲೀಸರ ಕ್ರೌರ್ಯ ಬಿಚ್ಚಿಟ್ಟ ಕೇರಳ ಮೂಲದ ವಿದ್ಯಾರ್ಥಿನಿ
