TOP NEWS

KSRTC: ಸಾರಿಗೆ ನೌಕರರಿಗೆ ಬಿಗ್ ಶಾಕ್: 1.10 ಲಕ್ಷ ಸಿಬ್ಬಂದಿಯ ₹2,500 ಕೋಟಿ ಪಿಎಫ್ ಹಣ ಸ್ವಂತ ವೆಚ್ಚಕ್ಕೆ ಬಳಕೆ ಆರೋಪ!

KSRTC Crisis 1 10 Lakh Employees Left High and Dry as PF Claims Stall Since August

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ (KSRTC) ಸ್ಥಿತಿ ದಿನದಿಂದ ದಿನಕ್ಕೆ ತೀರಾ ಹದಗೆಡುತ್ತಿದ್ದು, ಸಾರಿಗೆ ನೌಕರರ ಭವಿಷ್ಯದ ಮೇಲೆಯೇ ಕರಿನೆರಳು ಆವರಿಸಿದೆ. ಸಂಸ್ಥೆಯಲ್ಲಿ ತೀವ್ರ ಹಣಕಾಸಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸುಮಾರು 1.10 ಲಕ್ಷ ಸಾರಿಗೆ ನೌಕರರ ಸುಮಾರು 2,500 ಕೋಟಿ ರೂಪಾಯಿ ಪಿಎಫ್ (Provident Fund) ಹಣವನ್ನು ನಿಗಮಗಳು ತಮ್ಮ ಸ್ವಂತ ವೆಚ್ಚಕ್ಕೆ ಬಳಕೆ ಮಾಡಿಕೊಂಡಿವೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.

ನೌಕರರ ವೇತನದ ಪಿಎಫ್ ಹಣ ಎಲ್ಲಿ ಹೋಯಿತು?

ಪ್ರತಿ ತಿಂಗಳು ಸಾರಿಗೆ ನೌಕರರ ವೇತನದಿಂದ ಕಡಿತಗೊಳಿಸಲಾಗುವ ಶೇಕಡಾ 12 ರಷ್ಟು ಪಿಎಫ್ ಚಂದಾದಾರಿಕೆ ಹಣವನ್ನು ನಿಗಮದ ಪಿಎಫ್ ಟ್ರಸ್ಟ್‌ಗೆ ಜಮೆ ಮಾಡಬೇಕಿತ್ತು. ಆದರೆ, ಡೀಸೆಲ್ ಕೊರತೆ ನೀಗಿಸಲು ಹಾಗೂ ಸಿಬ್ಬಂದಿಗಳ ಸಂಬಳ ನೀಡಲು ಈ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಪರಿಣಾಮವಾಗಿ, ಕಳೆದ ಆಗಸ್ಟ್ ತಿಂಗಳಿನಿಂದ ಸಾರಿಗೆ ನೌಕರರ ಯಾವುದೇ ಪಿಎಫ್ ಕ್ಲೈಮ್‌ಗಳು (PF Claims) ಮಂಜೂರಾಗುತ್ತಿಲ್ಲ. ಮಕ್ಕಳ ಶಾಲಾ-ಕಾಲೇಜು ಶುಲ್ಕ ಪಾವತಿಸಲು, ವೈದ್ಯಕೀಯ ತುರ್ತು ವೆಚ್ಚಗಳಿಗೆ ಹಾಗೂ ಕುಟುಂಬದ ಶುಭ ಸಮಾರಂಭಗಳಿಗೆ ಕಷ್ಟಪಟ್ಟು ಸಂಗ್ರಹಿಸಿದ ಸ್ವಂತ ಪಿಎಫ್ ಹಣ ಸಿಗದೆ ನೌಕರರು ಪರದಾಡುವಂತಾಗಿದೆ. ಈ ಹಣ ನಿಗಮದ ಆಡಳಿತ ವೆಚ್ಚಕ್ಕೆ ಬಳಕೆಯಾಗಿದೆಯೋ ಅಥವಾ ಅಧಿಕಾರಿಗಳ ಜೇಬು ಸೇರಿದೆಯೋ ಎಂಬ ಸಂಶಯ ನೌಕರರ ವಲಯದಲ್ಲಿ ಮೂಡಿದೆ.

ಸಾರಿಗೆ ಒಕ್ಕೂಟಗಳ ಆಕ್ರೋಶ – ನೌಕರರ ಹಿತರಕ್ಷಣೆಗೆ ಪಟ್ಟು

ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಬಾಕಿ ಇರುವ ಸುಮಾರು 2,500 ಕೋಟಿ ರೂಪಾಯಿ ಪಿಎಫ್ ಹಣವನ್ನು ಕೂಡಲೇ ಪಿಎಫ್ ಟ್ರಸ್ಟ್‌ಗೆ ಜಮೆ ಮಾಡುವಂತೆ ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾರ್ಮಿಕರ ಬೆವರಿನ ಹಣವನ್ನು ಸಂಸ್ಥೆಯ ನಷ್ಟ ಸರಿದೂಗಿಸಲು ಬಳಸಿರುವುದು ಅಕ್ಷಮ್ಯ ಅಪರಾಧ ಎಂದು ಕಟುವಾಗಿ ಟೀಕಿಸಿದ್ದಾರೆ.

ನಾಲ್ಕೂ ನಿಗಮಗಳಿಗೆ ₹593.99 ಕೋಟಿ ಬಿಡುಗಡೆ ಮಾಡಿದ ಸರ್ಕಾರ

ಒಂದೆಡೆ ಪಿಎಫ್ ಹಣದ ವಿವಾದ ತಾರಕಕ್ಕೇರಿದ್ದರೆ, ಇನ್ನೊಂದೆಡೆ ಡೀಸೆಲ್ ಬಾಕಿ ಹಣ ತೀರಿಸಲಾಗದೆ ಹಲವು ಡಿಪೋಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಒಟ್ಟು 5,000 ಕೋಟಿಗೂ ಅಧಿಕ ಸಾಲ ಮತ್ತು ಹೊಣೆಗಾರಿಕೆಯಲ್ಲಿ ಮುಳುಗಿರುವ ನಾಲ್ಕೂ ಸಾರಿಗೆ ನಿಗಮಗಳ ತರ್ತು ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ವಿವಿಧ ಸಹಾಯಧನ ಯೋಜನೆಯಡಿ ₹593.99 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಈ ಹಣದಿಂದ ತಾತ್ಕಾಲಿಕವಾಗಿ ಡೀಸೆಲ್ ಪೂರೈಕೆ ಹಾಗೂ ತುರ್ತು ವೆಚ್ಚ ಸರಿದೂಗಿಸಲು ಅನುಕೂಲವಾಗಲಿದೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ‘ಸ್ಟಿಂಗ್’ ಧಮಾಕ: ಮಾಜಿ ಸಿಎಂ ಸಿದ್ದರಾಮಯ್ಯ ಪರ ಧ್ವನಿ ಎತ್ತಿ ಸಿಬಿಐ ತನಿಖೆಗೆ ಹೆಚ್‌ಡಿಕೆ ಆಗ್ರಹ!

Leave a Reply

Your email address will not be published. Required fields are marked *