TOP NEWS

Krishna Byre Gowda: ಹೈಕಮಾಂಡ್ ಸಂಧಾನಕ್ಕೆ ಒಲಿದ ಕೃಷ್ಣ ಬೈರೇಗೌಡ: ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ಸ್ವೀಕರಿಸಿದ ದಿನವೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್!

krishna byre gowda takes class to GBA officers regarding roads

ಬೆಂಗಳೂರು: ಖಾತೆ ಹಂಚಿಕೆಯಲ್ಲಿ ತಮಗಾಗಿದ್ದ ಅಸಮಾಧಾನವನ್ನು ಬದಿಗಿಟ್ಟು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಕೊನೆಗೂ ತಮ್ಮ ಇಲಾಖೆಯ ಅಧಿಕಾರ ಸೂತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನಡೆಸಿದ ಸರಣಿ ಸಂಧಾನ ಸಫಲವಾದ ಬೆನ್ನಲ್ಲೇ, ಜೂನ್ 16ರಂದು ಸಚಿವರು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪ್ರಮುಖ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಆಡಳಿತ ಆರಂಭಿಸಿದರು. ಇಲಾಖೆಯ ಚುಕ್ಕಾಣಿ ಹಿಡಿದ ಮೊದಲ ದಿನವೇ ಬೆಂಗಳೂರಿನ ಜ್ವಲಂತ ಸಮಸ್ಯೆಗಳಾದ ರಸ್ತೆ ಗುಂಡಿ ಹಾಗೂ ಕಸದ ವಿಲೇವಾರಿ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಬೆವರಿಳಿಸಿದ್ದಾರೆ.

ನೆರೆ ರಾಜ್ಯಗಳನ್ನು ನೋಡಿ ಕಲಿಯಿರಿ; ನಮ್ಮ ರಸ್ತೆಗಳು ಹೀಗೇಕೆ?

ನಗರದ ರಸ್ತೆಗಳ ದುಃಸ್ಥಿತಿಯ ಬಗ್ಗೆ ಇಂಜಿನಿಯರ್‌ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ರಾಜಧಾನಿಯಲ್ಲಿ ಸುಲಲಿತವಾಗಿ ರಸ್ತೆ ನಿರ್ಮಿಸುವುದು ನಿಮಗೇನಾದರೂ ರಾಕೆಟ್ ತಂತ್ರಜ್ಞಾನವೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ನಿರಂತರವಾಗಿ ಮಳೆ ಸುರಿಯುವ ಪಕ್ಕದ ರಾಜ್ಯಗಳಲ್ಲೂ ರಸ್ತೆಗಳು ಎಷ್ಟು ಉತ್ತಮ ಗುಣಮಟ್ಟ ಹೊಂದಿವೆ ಎಂಬುದನ್ನು ಗಮನಿಸುವಂತೆ ತಾಕೀತು ಮಾಡಿದ ಅವರು, “ನಮ್ಮ ಇಲಾಖೆಯಿಂದ ನಿಮಗೆ ಬಜೆಟ್ ಅಥವಾ ಅನುದಾನದ ಕೊರತೆ ಏನಾದರೂ ಇದೆಯೇ? ಹಣಕಾಸಿನ ನೆರವು ಸಮರ್ಪಕವಾಗಿದ್ದರೂ ಜಗತ್ಪ್ರಸಿದ್ಧ ಬೆಂಗಳೂರಿನಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ನಿಮಗೇಕೆ ಸಾಧ್ಯವಾಗುತ್ತಿಲ್ಲ?” ಎಂದು ತರಾಟೆಗೆ ತೆಗೆದುಕೊಂಡರು.

ಜಾಗತಿಕ ಆಸ್ತಿಯಾಗಿರುವ ಬೆಂಗಳೂರಿನ ಅಭಿವೃದ್ಧಿಯೇ ನಮ್ಮ ಗುರಿ

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ತಾವು ನಗರದ ಶಾಸಕರೇ ಆಗಿರುವುದರಿಂದ ಇಲ್ಲಿನ ತಳಮಟ್ಟದ ಸವಾಲುಗಳ ಸಂಪೂರ್ಣ ಅರಿವು ತಮಗಿದೆ ಎಂದರು. ಬೆಂಗಳೂರು ಇಡೀ ಜಗತ್ತಿಗೆ ಮಾದರಿಯಾಗಿರುವ ಅತ್ಯಮೂಲ್ಯ ಆಸ್ತಿಯಾಗಿದ್ದು, ಇಲ್ಲಿ ವಾಸಿಸುವ ಒಂದೂವರೆ ಕೋಟಿ ನಾಗರಿಕರ ನೆಮ್ಮದಿಯ ಜೀವನ ನಮಗೆ ಮುಖ್ಯವಾಗಿದೆ. ನಗರದ ಸೌಂದರ್ಯ, ರಸ್ತೆ, ಕಸ ಹಾಗೂ ಸಂಚಾರ ದಟ್ಟಣೆಯ ನಿರ್ವಹಣೆಯನ್ನು ಚುರುಕುಗೊಳಿಸುವ ಉದ್ದೇಶದಿಂದಲೇ ಬಿಬಿಎಂಪಿಯನ್ನು ವಿಕೇಂದ್ರೀಕರಣಗೊಳಿಸಿ ಐದು ಹೊಸ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೂಪಿಸಿರುವ ಬೆಂಗಳೂರಿನ ದೂರದೃಷ್ಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ವಿವರಿಸಿದರು.

ಕಸ ಮುಕ್ತ ನಗರಕ್ಕೆ ಹೈಲೆವೆಲ್ ಕಮಿಟಿ ರಚನೆ

ತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾತನಾಡಿದ ಸಚಿವರು, ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ನಾಗರಿಕರ ಜವಾಬ್ದಾರಿಯುತ ಸಹಕಾರವೂ ಅಷ್ಟೇ ಮುಖ್ಯ ಎಂದರು. ಅಧಿಕಾರಕ್ಕೆ ಬಂದ ತಕ್ಷಣವೇ ಎಲ್ಲವನ್ನೂ ಮ್ಯಾಜಿಕ್ ಮಾಡಿದಂತೆ ಒಂದೇ ದಿನದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಸದ ಟೆಂಡರ್ ಪ್ರಕ್ರಿಯೆಗಳಲ್ಲಿನ ಗೊಂದಲಗಳನ್ನು ನಿವಾರಿಸಲು ಸರ್ಕಾರ ಈಗಾಗಲೇ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ತಾಂತ್ರಿಕ ವರದಿ ಹಾಗೂ ಶಿಫಾರಸುಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಠಿಣ ಸುಧಾರಣೆಗಳನ್ನು ತರಲಾಗುವುದು ಎಂದು ಭರವಸೆ ನೀಡಿದರು.

ಪೂರ್ಣ ಪ್ರಮಾಣದ ಖಾತೆಯ ಅಗತ್ಯವಿತ್ತು; ವರಿಷ್ಠರ ಆದೇಶಕ್ಕೆ ಗೌರವ

ಇದೇ ವೇಳೆ ತಮಗಿದ್ದ ಖಾತೆ ಅಸಮಾಧಾನದ ಕುರಿತು ಮುಕ್ತವಾಗಿ ಸ್ಪಷ್ಟನೆ ನೀಡಿದ ಕೃಷ್ಣ ಬೈರೇಗೌಡ, “ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ಯಾವುದೇ ಗೊಂದಲವಿಲ್ಲದೆ ನಿರಂತರವಾಗಿ ಕೆಲಸ ಮಾಡಲು ಪೂರ್ಣ ಪ್ರಮಾಣದ ಖಾತೆಯ ಜವಾಬ್ದಾರಿ ಅತ್ಯಗತ್ಯ ಎಂಬುದು ನನ್ನ ನಿಲುವಾಗಿತ್ತು. ಇದೇ ಹಕ್ಕೊತ್ತಾಯವನ್ನು ನಾನು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ವರಿಷ್ಠರ ಮುಂದೆ ಮಂಡಿಸಿದ್ದೆ. ಆಡಳಿತಾತ್ಮಕವಾಗಿ ಸಂಪೂರ್ಣ ಸ್ಪಷ್ಟತೆ ಸಿಕ್ಕ ನಂತರವೇ ಕಚೇರಿಗೆ ಬರಲು ನಿರ್ಧರಿಸಿದ್ದೆ. ಆದರೆ ಮುಖ್ಯಮಂತ್ರಿಗಳು ಸದ್ಯದ ಪರಿಸ್ಥಿತಿಗೆ ತಕ್ಕಂತೆ ಈ ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ಕಾರ್ಯದಕ್ಷತೆಗೆ ಸೂಕ್ತ ಖಾತೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ಭರವಸೆ ನನಗಿದೆ. ಸದ್ಯಕ್ಕೆ ಹಿರಿಯರ ಸೂಚನೆಯನ್ನು ಗೌರವಿಸಿ ಕೆಲಸ ಆರಂಭಿಸಿದ್ದೇನೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ಇದನ್ನೂ ಓದಿ: ಪರಿಷತ್ ಚುನಾವಣೆ ತಲ್ಲಣ: ಸಿಎಲ್‌ಪಿ ಸಭೆಗೂ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಡಿಕೆಶಿ ದಿಢೀರ್ ಭೇಟಿ, ರಹಸ್ಯ ಸಮಾಲೋಚನೆ!

Leave a Reply

Your email address will not be published. Required fields are marked *