TOP NEWS

KPSC: ಪ್ರಶ್ನೆಪತ್ರಿಕೆಗೆ 70 ಲಕ್ಷ ರೂ. ಲಂಚ: ಕೆಪಿಎಸ್‌ಸಿ ಬೃಹತ್ ಅಕ್ರಮದ ಬಣ್ಣ ಬಯಲು ಮಾಡಿದ ಇಡಿ!

KPSC Recruitment Fraud ED Seeks Custody of Ex Chairman Shivashankarappa and Member Geetha

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯ (ಇಡಿ) ತನ್ನ ತನಿಖಾ ಜಾಲವನ್ನು ಮತ್ತಷ್ಟು ಬಿಗಿಗೊಳಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಸದಸ್ಯೆ ಗೀತಾ ಅವರನ್ನು ಇಡಿ ಅಧಿಕಾರಿಗಳು ಸಿಸಿಎಚ್ 4ನೇ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ರಮದ ಜಾಡು ಹಿಡಿಯಲು ಇಬ್ಬರನ್ನೂ 14 ದಿನಗಳ ಕಾಲ ತನಿಖಾಧಿಕಾರಿಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಶ್ನೆಪತ್ರಿಕೆಗೆ ₹30 ಲಕ್ಷದಿಂದ ₹70 ಲಕ್ಷದವರೆಗೆ ದರ ನಿಗದಿ!

ವಿಶೇಷ ನ್ಯಾಯಾಲಯದಲ್ಲಿ ಇಡಿ ಪರ ವಾದ ಮಂಡಿಸಿದ ವಕೀಲ ಮಧುರಾವ್, ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಬೃಹತ್ ಲಂಚಾವತಾರದ ವಿವರಗಳನ್ನು ಎಳೆಎಳೆಯಾಗಿ ನ್ಯಾಯಪೀಠದ ಮುಂದಿಟ್ಟರು. ಅರ್ಹ ಅಭ್ಯರ್ಥಿಗಳನ್ನು ಬದಿಗೊತ್ತಿ, ಹಣ ತೆತ್ತವರಿಗೆ ಮಣೆ ಹಾಕಲು ದೊಡ್ಡ ಜಾಲವೇ ಸಕ್ರಿಯವಾಗಿತ್ತು. ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸಲು ಪ್ರತಿಯೊಬ್ಬ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಇನ್ನು ಕೆಲವು ಆಯ್ದ ಅಭ್ಯರ್ಥಿಗಳಿಗೆ ಸಂಪೂರ್ಣ ಸಹಾಯ ಮಾಡಲು ತಲಾ 70 ಲಕ್ಷ ರೂಪಾಯಿಗಳವರೆಗೆ ಲಂಚ ಪಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವಕೀಲರು ತಿಳಿಸಿದರು.

ಗೋಲ್ಡ್ ಮೆಡಲಿಸ್ಟ್‌ಗಳಿಗಿಂತ ಕಮ್ಮಿ ಅಂಕದ ಅಭ್ಯರ್ಥಿಗಳೇ ಟಾಪರ್ಸ್!

ಪರೀಕ್ಷಾ ಅಕ್ರಮದ ತೀವ್ರತೆಯನ್ನು ವಿವರಿಸಿದ ವಕೀಲರು, ಪದವಿ ಶಿಕ್ಷಣದಲ್ಲಿ ಗೋಲ್ಡ್ ಮೆಡಲ್ ಪಡೆದ ಹಾಗೂ ಕಠಿಣ ಐಎಫ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಪ್ರತಿಭಾವಂತ ಅಭ್ಯರ್ಥಿಗಳೇ ಈ ಪರೀಕ್ಷೆಯಲ್ಲಿ 350 ಅಂಕ ಗಳಿಸಲು ಹರಸಾಹಸ ಪಟ್ಟಿದ್ದರು. ಆದರೆ, ಕಾಲೇಜು ಹಂತದಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಿದ್ದ ಸಾಧಾರಣ ವಿದ್ಯಾರ್ಥಿಗಳು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉಡಾಫೆಯಾಗಿ 450 ಅಂಕಗಳನ್ನು ಬಾಚಿಕೊಂಡಿದ್ದಾರೆ. ಇದು ಸಹಜವಾಗಿ ನಡೆದ ಪರೀಕ್ಷೆಯಲ್ಲ, ಬದಲಾಗಿ ಅಕ್ರಮದ ಮೂಲಕವೇ ಅಂಕಗಳನ್ನು ನೀಡಲಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

2022ರಿಂದ 13 ಪರೀಕ್ಷೆಗಳಲ್ಲಿ ಸರಣಿ ಅಕ್ರಮ:

2026ರ ಜನವರಿ 9ರಂದು ಪರೀಕ್ಷೆ ನಡೆಯುವ ಕೇವಲ ಒಂದು ದಿನ ಮೊದಲು ಕೆಪಿಎಸ್‌ಸಿ ಮಾಜಿ ಅಧ್ಯಕ್ಷರು ಕೆಲವು ಅಭ್ಯರ್ಥಿಗಳ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವ ಸಾಕ್ಷ್ಯಗಳು ಸಿಕ್ಕಿವೆ. ಬೆಂಗಳೂರಿನ ಹೊರವಲಯದ ಖಾಸಗಿ ತಾಣಗಳಲ್ಲಿ ಪರೀಕ್ಷಾ ಅಕ್ರಮದ ಸಂಚು ರೂಪಿಸಿ ಉತ್ತರಗಳನ್ನು ಹಂಚಲಾಗಿತ್ತು. ಈಗಾಗಲೇ ಬಂಧನಕ್ಕೊಳಗಾಗಿರುವ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ನೀಡಿದ ಮಾಹಿತಿಯ ಆಧಾರದ ಮೇಲೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ದೃಢಪಟ್ಟಿದೆ. 2022ರಿಂದೀಚೆಗೆ ನಡೆದ ಸುಮಾರು 13 ವಿವಿಧ ನೇಮಕಾತಿ ಪರೀಕ್ಷೆಗಳಲ್ಲೂ ಇದೇ ರೀತಿ ಸರಣಿ ಅಕ್ರಮ ಎಸಗಲಾಗಿದೆ ಎಂದು ಜ್ಞಾನೇಂದ್ರ ಒಪ್ಪಿಕೊಂಡಿದ್ದಾರೆ. ಈ ಬೃಹತ್ ಜಾಲದ ಆಳ ಹಾಗೂ ಅಕ್ರಮ ಹಣದ ವರ್ಗಾವಣೆಯ ಸಂಪೂರ್ಣ ರಹಸ್ಯ ಭೇದಿಸಲು ಇಬ್ಬರೂ ಆರೋಪಿಗಳನ್ನು ಇಡಿ ಕಸ್ಟಡಿಗೆ ನೀಡುವುದು ಅಗತ್ಯವಾಗಿದೆ ಎಂದು ವಕೀಲ ಮಧುರಾವ್ ವಾದಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ: ‘ಸ್ಟಿಂಗ್ ಆಪರೇಷನ್ ಡಿಕೆಶಿ ಹಳೆಯ ಕಸಬು’!

Leave a Reply

Your email address will not be published. Required fields are marked *