TOP NEWS

Koppal: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿ ದೇವಸ್ಥಾನ ಕಬ್ಜಾ: ಎಲ್ಲಾ ಕೊಠಡಿಗಳಿಗೆ ಬೀಗ ಮುದ್ರೆ ಹಾಕಿದ ಬಾಬಾ

High Court Order Aftermath Vidyadas Baba Secures Anjanadri Temple Rooms and Restricts Official Entry koppal

ಕೊಪ್ಪಳ: ಆಂಜನೇಯ ಸ್ವಾಮಿಯ ಜನ್ಮಸ್ಥಳ ಎಂದೇ ವಿಶ್ವಪ್ರಸಿದ್ಧಿ ಪಡೆದಿರುವ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ದಿಢೀರ್ ಅಭೂತಪೂರ್ವ ಹೈಡ್ರಾಮಾವೊಂದು ನಡೆದಿದೆ. ಹೈಕೋರ್ಟ್‌ ನೀಡಿರುವ ತೀರ್ಪಿನ ಬೆನ್ನಲ್ಲೇ, ಅಂಜನಾದ್ರಿ ದೇವಸ್ಥಾನದ ಮೇಲಿದ್ದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ಸಿಬ್ಬಂದಿಯನ್ನು ಹೊರಕ್ಕಟ್ಟಿರುವ ತಪೋಭೂಮಿ ಆಶ್ರಮದ ಮಹಂತ್ ವಿದ್ಯಾದಾಸ ಬಾಬಾ, ದೇವಸ್ಥಾನದ ಆಡಳಿತ ಕಚೇರಿ ಸೇರಿದಂತೆ ಎಲ್ಲಾ ಕೊಠಡಿಗಳಿಗೆ ಬೀಗ ಹಾಕಿ ಬೆಟ್ಟವನ್ನು ಸಂಪೂರ್ಣ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಮಹತ್ವದ ಬೆಳವಣಿಗೆ

ಈ ಮೊದಲು ಜಿಲ್ಲಾಡಳಿತವು ಅಂಜನಾದ್ರಿ ಪರ್ವತವನ್ನು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ‘ಅಧಿಸೂಚಿತ ದೇವಸ್ಥಾನ’ (Notified Temple) ಎಂದು ಆದೇಶ ಹೊರಡಿಸಿ, ತನ್ನ ಆಡಳಿತ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಆದರೆ, ಜಿಲ್ಲಾಡಳಿತದ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಧಾರವಾಡ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಜಿಲ್ಲಾಡಳಿತ ಹೊರಡಿಸಿದ್ದ ಆ ಆದೇಶವನ್ನು ಇತ್ತೀಚೆಗೆ ಸಂಪೂರ್ಣವಾಗಿ ರದ್ದುಗೊಳಿಸಿ ತೀರ್ಪು ನೀಡಿತ್ತು. ಹೈಕೋರ್ಟ್ ನಿರ್ದೇಶನ ಹೊರಬಿದ್ದ ತಕ್ಷಣವೇ ಸಕ್ರಿಯರಾದ ವಿದ್ಯಾದಾಸ ಬಾಬಾ, ಬೆಟ್ಟದಲ್ಲಿ ಇಲಾಖೆಯ ಆಡಳಿತಕ್ಕಿದ್ದ ಎಲ್ಲಾ ಅಧಿಕಾರವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

8 ಕೊಠಡಿಗಳಿಗೆ ಬೀಗ, ಸಿಬ್ಬಂದಿಗೆ ಪ್ರವೇಶ ನಿಷೇಧ!

ಹೈಕೋರ್ಟ್ ಆದೇಶದ ನೆಪದಲ್ಲಿ ಕಾರ್ಯಾಚರಣೆಗಿಳಿದ ವಿದ್ಯಾದಾಸ ಬಾಬಾ ಮತ್ತು ಅವರ ಬೆಂಬಲಿಗರು, ಬೆಟ್ಟದ ಮೇಲಿದ್ದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಕೆಳಗಿಳಿಯುವಂತೆ ಸೂಚಿಸಿ ಹೊರಗಟ್ಟಿದ್ದಾರೆ. ಅದಲ್ಲದೆ, ದೇವಸ್ಥಾನದ ಮುಖ್ಯ ಆಡಳಿತ ಕಚೇರಿ, ಸಾಮಗ್ರಿಗಳ ಉಗ್ರಾಣ ಕೊಠಡಿ, ಸಂಸ್ಕೃತ ಪಾಠಶಾಲೆ, ಅಡುಗೆ ಕೋಣೆ ಸೇರಿದಂತೆ ಒಟ್ಟು 8 ಪ್ರಮುಖ ಕಟ್ಟಡ ಹಾಗೂ ಕೊಠಡಿಗಳಿಗೆ ಸ್ವತಃ ಬೀಗ ಜಡಿದಿದ್ದಾರೆ. ಇದಷ್ಟೇ ಅಲ್ಲದೆ, ಇನ್ಮುಂದೆ ಮುಜರಾಯಿ ಇಲಾಖೆಯ ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಗಳು ಬೆಟ್ಟದ ಮೇಲೆ ಬರುವಂತಿಲ್ಲ ಎಂದು ಕಟ್ಟುನಿಟ್ಟಿನ ಪ್ರವೇಶ ನಿಷೇಧ ಹೇರಿದ್ದಾರೆ.

ಬೆಟ್ಟ ಸಂಪೂರ್ಣ ಕಬ್ಜಾ: ಮುಂದೇನು?

ಜಿಲ್ಲಾಡಳಿತದ ಆದೇಶ ರದ್ದಾದ ಬೆನ್ನಲ್ಲೇ ದೇವಸ್ಥಾನದ ಸಂಪೂರ್ಣ ನಿರ್ವಹಣೆ ಮತ್ತು ಹಕ್ಕುಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿರುವ ವಿದ್ಯಾದಾಸ ಬಾಬಾ ಅವರ ಈ ದಿಢೀರ್ ಕ್ರಮವು ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಹೈಕೋರ್ಟ್ ಆದೇಶ ಹಾಗೂ ದೇವಸ್ಥಾನದ ಪ್ರಸ್ತುತ ಸ್ಥಿತಿಗತಿಯ ಕುರಿತು ಜಿಲ್ಲಾಡಳಿತ ಮತ್ತು ಸರ್ಕಾರ ಮುಂದೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯ-ರಮೇಶ್ ಜಾರಕಿಹೊಳಿ ರಹಸ್ಯ ಸಭೆ: ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ!

Leave a Reply

Your email address will not be published. Required fields are marked *