ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿಗಳು ಕೇವಲ ಸಾಲು ಸಾಲು ಯೋಜನೆಗಳನ್ನು ಪುಗಸಟ್ಟೆ ಘೋಷಣೆ ಮಾಡುತ್ತಿದ್ದಾರೆ ಹೊರತು ಅವುಗಳಿಗೆ ಹಣ ಮೀಸಲಿಡಲು ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ ಎಂದು ಕಟುವಾಗಿ ವೀಮರ್ಶಿಸಿದ್ದಾರೆ.
ಯೋಜನೆಗಳಿಗೆ ಹಣವನ್ನ ಎಲ್ಲಿಂದ ತರುತ್ತಾರೆ?
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಪ್ರವಾಸದ ವೇಳೆ ಸಿಎಂ ಬರೋಬ್ಬರಿ 32 ರಿಂದ 35 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಿಸಿದ್ದಾರೆ. ಆದರೆ, ಈ ಯೋಜನೆಗಳಿಗೆ ಹಣವನ್ನು ಎಲ್ಲಿಂದ ತರುತ್ತಾರೆ? ರಿಯಲ್ ಎಸ್ಟೇಟ್ ಕಂಪನಿಗಳಿಂದ ತಂದು ಕೊಡುತ್ತಾರೆಯೇ ಎಂದು ನೇರವಾಗಿ ಪ್ರಶ್ನಿಸಿದರು. ವಿಶೇಷ ಅಧಿವೇಶನ ಕರೆಯುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅವರ ಸ್ವಪಕ್ಷದ ಶಾಸಕರೇ ಈಗ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಬಿಜೆಪಿಯು ಬೃಹತ್ ಪಾದಯಾತ್ರೆ ಕೈಗೊಳ್ಳದಿದ್ದರೆ ಸರ್ಕಾರ ಈ ವಿಶೇಷ ಅಧಿವೇಶನವನ್ನೇ ಕರೆಯುತ್ತಿರಲಿಲ್ಲ, ನಾಯಕರೆಲ್ಲ ಮಂಗಳೂರಿನಲ್ಲಿ ಮೀನು ಹಿಡಿದುಕೊಂಡು ಕಾಲ ಕಳೆಯುತ್ತಿದ್ದರು ಎಂದು ಕಾಲೆಳೆದರು.
ಕಾಂಗ್ರೆಸ್ನ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಸೇರಿದಂತೆ ಮುದ್ದೇಬಿಹಾಳದ ಶಾಸಕರು ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದನ್ನು ವಿಜಯೇಂದ್ರ ನೆನಪಿಸಿದರು. ರಾಜ್ಯದಲ್ಲಿ ಬಿಜೆಪಿ ಶಾಸಕರಿರುವ 44 ಕ್ಷೇತ್ರಗಳ ಪೈಕಿ ಕೇವಲ 23 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಸ್ಪಷ್ಟ ರಾಜಕೀಯ ತಾರತಮ್ಯವಾಗಿದೆ. ತಕ್ಷಣವೇ ಶಿವಮೊಗ್ಗ, ಶಿಕಾರಿಪುರ ಸೇರಿದಂತೆ ರಾಜ್ಯದ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರ ನೀರಿನ ಅಭಾವ ಹಾಗೂ ವಿದ್ಯುತ್ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ವಿದ್ಯುತ್ ಅಭಾವ ಎದುರಾದ ತಕ್ಷಣವೇ ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಿ ರೈತರನ್ನು ರಕ್ಷಿಸಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರೈತರನ್ನು ನಡುಬೀದಿಯಲ್ಲಿ ತಂದು ನಿಲ್ಲಿಸಿದೆ ಎಂದು ಕಿಡಿಕಾರಿದರು.
ಸಾರಿಗೆ ಸಂಸ್ಥೆ ಆರ್ಥಿಕ ಪರಿಸ್ಥಿತಿ ಹಾಳಾಗಿದೆ
ಇನ್ನೊಂದೆಡೆ, ರಾಜ್ಯ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕೆಎಸ್ಆರ್ಟಿಸಿ ಎಂಡಿ ಅವರು ಸರ್ಕಾರಕ್ಕೆ ಪತ್ರ ಬರೆದು ಸುಮಾರು 6 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ. ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದೆ ಎಲ್ಲಾ ಬಸ್ಗಳನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರೂ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಶಾಲಾ ಮಕ್ಕಳಿಗೆ ನೀಡಬೇಕಾದ ಶೂ ಮತ್ತು ಸಾಕ್ಸ್ಗಳು ತಿಂಗಳು ಕಳೆದರೂ ತಲುಪಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೇವಲ ಬಾಯಿಮಾತಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸರ್ಕಾರ ವಿರುದ್ಧ ಸಾರಿಗೆ ನೌಕರರ ಸಮರ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 7ರಂದು ಬೃಹತ್ ಪ್ರತಿಭಟನೆ!
