ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ 1 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (MC Sudhakar) ತಿಳಿಸಿದ್ದಾರೆ.
1 ಸಾವಿರ ಹುದ್ದೆ ಭರ್ತಿಗೆ ಬಜೆಟ್ ಆದೇಶ
ವಿಧಾನ ಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 3 ಸಾವಿರ ಹುದ್ದೆಗಳ ಪೈಕಿ 1 ಸಾವಿರ ಭರ್ತಿ ಮಾಡಲು ಬಜೆಟ್‌ನಲ್ಲಿ ಮಂಜೂರಾತಿ ದೊರೆತಿದೆ. ಆಯಾ ವಿಶ್ವ ವಿದ್ಯಾಲಯಗಳ ಕುಲಪತಿಗಳ ಜೊತೆ ಚರ್ಚಿಸಿ ಅಗತ್ಯವಿರುವ ಬೋಧಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಲಿಕಾ ವ್ಯವಸ್ಥೆಯಲ್ಲಿ ಬದಲಾವಣೆ
ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳ ಕಲಿಕಾ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ರಮೇಶ್ ಬಾಬು ಅವರ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಡಿಜಿಟಲ್ ಕಲಿಕೆ, ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ, ಕಲಿಕೆಯ ಜೊತೆ ಕೌಶಲ್ಯ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: 890 ವಿಧದ ಔಷಧಿಗಳ ಖರೀದಿಗೆ 880 ಕೋಟಿ ವೆಚ್ಚ: ದಿನೇಶ್ ಗುಂಡೂರಾವ್
